ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ ಮಂಗಳವಾರ ಆಡಳಿತ ಸೌಧದಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಗುರುವಾಯನಕೆರೆ ಬಿಆರ್ ಸಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಜೇಶ್ ಉಪನ್ಯಾಸ ನೀಡಿ, ಪ್ರಸ್ತುತ ವಿಶ್ವಕರ್ಮರು ಕುಲಕಸುಬು ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಪರಿಣಾಮ ಕುಲಕಸುಬು ನಶಿಸಿ ಹೋಗುತ್ತಿದ್ದು, ವಿಶ್ವಕರ್ಮರು ಹಿಂದೆ ಬೀಳಲು ಇದು ಮುಖ್ಯ ಕಾರಣವಾಗಿದೆ. ಈ ನಿಟ್ಟಿನಲ್ಲಿ ವಿಶ್ವಕರ್ಮರು ಅವಲಂಬಿಸಿರುವ ಪಂಚ ಕುಲಕಸುಬಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ತತ್ವ-ಧ್ಯೇಯ ಇಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ವಿಶ್ವಕರ್ಮರು ಜಗತ್ತಿಗೆ ನೀಡಿರುವ ಕೊಡುಗೆ ಅಪಾರ. ದೇಶದ ಬೆನ್ನೆಲುಬು ರತ. ರೈತರ ಬೆನ್ನೆಲುಬು ವಿಶ್ವಕರ್ಮರು ಎಂದ ಅವರು, ಭಾರತ ಸಾಂಸ್ಕೃತಿಕ ಕೊಡುಗೆಯಲ್ಲಿ ಗುರುತಿಸಿಕೊಂಡರೆ ಅದು ವಿಶ್ವಕರ್ಮರ ಕೊಡುಗೆ. ವಿಶ್ವಕರ್ಮರಿಗೆ ಶಿಕ್ಷಣದ ವ್ಯವಸ್ಥೆ ಜತೆ ವಿಶ್ವಕರ್ಮ ಅಧ್ಯಯನ ಕೇಂದ್ರ ಸರಕಾರದಿಂದ ರಚನೆಯಾಗಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಶಿಕ್ಷಣ ಇಲಾಖೆಯ ವಿಷ್ಭುಪ್ರಸಾದ್, ಸಿಡಿಪಿಒ ಮಂಗಳ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಶರಣ್ಯ ಕಾರ್ಯಕ್ರಮ ನಿರೂಪಿಸಿದರು.