ದೇಶಾದ್ಯಂತ ಸೇವಾ ಕಾರ್ಯಗಳು, ಬಡವರಿಗೆ ನೆರವು
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ಬಿಜೆಪಿ ನಾಯಕರು, ಹಿತೈಷಿಗಳು ಬೆಳಗ್ಗಿನಿಂದಲೇ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಪ್ರಾರಂಭಿಸಿದ್ದಾರೆ. ಹುಟ್ಟುಹಬ್ಬದಂದು ಮೋದಿ ಯಾವುದೇ ಆಚರಣೆ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಆದರೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ವಿವಿಧ ಸೇವಾ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸುತ್ತಾರೆ. ಸೇವಾ ಪಾಕ್ಷಿಕ, ಸೇವಾ ಪರ್ವ, ಸ್ವಚ್ಛತೆ, ಬಡವರಿಗೆ ನೆರವು, ರಕ್ತದಾನ ಮುಂತಾದ ಸಾಮಾಜಿಕ ಸೇವೆಗಳು ಮೋದಿ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತವೆ. ದೇವಸ್ಥಾನಗಳಲ್ಲಿ ಮೋದಿಗೆ ಆಯುರಾರೋಗ್ಯ ಹಾರೈಸಲು ವಿಶೇಷ ಪೂಜೆಗಳನ್ನು ಏರ್ಪಡಿಸುತ್ತಾರೆ.
ಪ್ರಧಾನಿ ತವರೂರು ಗುಜರಾತ್‌ನ ಸೂರತ್‌ನಲ್ಲಿ ಆಟೋ ರಿಕ್ಷಾ ಚಾಲಕರು ಇಂದು ಪ್ರಯಾಣ ದರದಲ್ಲಿ ಶೇ.10 ರಿಂದ ಶೇ.100ರ ವರೆಗೆ ರಿಯಾಯಿತಿ ಘೋಷಿಸಿದ್ದಾರೆ. ಆ.16ರಂದು ಕೂಡ ಸೂರತ್‌ನ ಆಟೋ ಚಾಲಕರ ಸಂಘವು ಪ್ರಯಾಣಿಕರಿಗೆ ಉಚಿತ ಪ್ರಯಾಣ ಒದಗಿಸಿದೆ. ಸೂರತ್‌ನ ವಿವಿಧ ಕ್ಷೇತ್ರಗಳ 2,500ಕ್ಕೂ ಅಧಿಕ ಉದ್ಯಮಿಗಳು ಗ್ರಾಹಕರಿಗೆ ರಿಯಾಯಿತಿ ನೀಡುವ ಮೂಲಕ ಮೋದಿಗೆ ಗೌರವ ತೋರಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಟೇಲ್, ತರಕಾರಿ ಮಾರುಕಟ್ಟೆ, ಖಾಸಗಿ ಆಸ್ಪತ್ರೆ, ಬೇಕರಿಗಳು ಸೇರಿ ಹಲವು ಕ್ಷೇತ್ರಗಳಲ್ಲಿ ಗ್ರಾಹಕರು ಖರೀದಿಸುವ ವಸ್ತು, ತಿನಿಸುಗಳಿಗೆ ರಿಯಾಯಿತಿ ಸಿಗಲಿದೆ.
ಅಜ್ಮೇರ್ ಶರೀಫ್ ದರ್ಗಾದಲ್ಲಿ 4 ಕೆ.ಜಿ. ಸಸ್ಯಾಹಾರವನ್ನು ತಯಾರಿಸಿ ಬಡವರು, ನಿರ್ಗತಿಕರು, ನಿರಾಶ್ರಿತರಿಗೆ ವಿತರಿಸಲು ಯೋಜಿಸಲಾಗಿದೆ.
ಹುಟ್ಟುಹಬ್ಬದಂದೂ ಮೋದಿ ದಿನಚರಿ ಎಂದಿನಂತೆ ಇರುತ್ತದೆ. ಇಂದು ಅವರು ಒಡಿಶಾದ ಭುವನೇಶ್ವರ ಸಮೀಪ ಗಡಕಾನದಲ್ಲಿ ಪಿಎಂ ಆವಾಸ್ ಯೋಜನೆಯ 26 ಲಕ್ಷ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.
ಇದರೊಂದಿಗೆ ಇಂದು ಮೋದಿ 2,871 ಕೋಟಿ ರೂ. ರೈಲ್ವೆ ಯೋಜನೆಗಳು ಮತ್ತು 1000 ಕೋ.ರೂ.ಯ ಮೂಲಸೌಲಭ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ತ್ರಿಪುರದ ಮುಖ್ಯಮಂತ್ರಿ ಮಾಣಿಕ್ ಸಾಹ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತಿತರರು ಮೋದಿಯನ್ನು ದೇಶದ ಕ್ಯಾಪ್ಟನ್ ಎಂದು ಕರೆದು ಶುಭಾಶಯ ಸಂದೇಶ ಪೋಸ್ಟ್ ಮಾಡಿದ್ದಾರೆ.