ಕಾರ್ಕಳ: ಲೈವ್ ಚಾನೆಲ್ ನಡೆಸುವವರು ಸಂಘಟಿತರಾದಲ್ಲಿ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಲೈವ್ ಚಾನೆಲ್ ಅಸೋಸಿಯೇಶನ್ ಸ್ಥಾಪನೆ ಉತ್ತಮ ಬೆಳವಣಿಗೆ ಎಂದು ದಾಯ್ಜಿವರ್ಲ್ಡ್ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಬಂಡಿಮಠ ಶ್ರೀ ಮೂಡುಮಹಾಗಣಪತಿ ಕಲಾಮಂದಿರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಲೈವ್ ಚಾನೆಲ್ ಅಸೋಸಿಯೇಶನ್ ಉದ್ಘಾಟಿಸಿ ಮಾತನಾಡಿದರು.
ಲೈವ್ ಚಾನೆಲ್ ಸಂಸ್ಥೆ ಮಾಲಕರು ಪ್ರಸ್ತುತ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪರಿಕರ ಖರೀದಿ ಬಂಡವಾಳ, ಸಿಬ್ಬಂದಿ ಖರ್ಚು, ಕಚೇರಿ ನಿರ್ವಹಣೆ, ಪರಿಕರ ಸರ್ವಿಸ್ ಹೀಗೆ ಲೈವ್ ಗೆ ಸಂಬಂಧಿಸಿದ ಎಲ್ಲ ವೆಚ್ಚವನ್ನು ಲೆಕ್ಕ ಹಾಕಿ ಲೈವ್‌ಗೆ ಒಂದು ದರ ನಿಗದಿಗೊಳಿಸಬೇಕಿದೆ ಎಂದರು.
ನಾನು ದಾಯ್ಜಿವರ್ಲ್ಡ್ ಪ್ರಾರಂಭ ಮಾಡುವಾಗ ಒಬ್ಬನೆ ಇದ್ದೆ. ಆಗ ನನಗೆ ಎನರ್ಜಿ ಇತ್ತು. ಆದರೆ ಯಾವಾಗ ನಾನು ನಾಲ್ಕು ಮಂದಿಯೊಂದಿಗೆ ಸೇರಿ ಸಂಸ್ಥೆಯನ್ನು ವಿಸ್ತರಿಸಲು ಮುಂದಾದೆನೋ ಆವಾಗ ನನಗೆ ಸಿನರ್ಜಿ ಬಂತು. ಅಂದರೆ ಒಬ್ಬನ ತಾಕತ್ತು ಎನರ್ಜಿಯಾದರೆ ನಾಲ್ಕು ಮಂದಿಯ ತಾಕತ್ತು ಸಿನರ್ಜಿಯಾಯಿತು. ಅಂತೆಯೇ ಲೈವ್ ನಡೆಸುವ ಎಲ್ಲರೂ ಒಗ್ಗಟ್ಟಾಗಿ ಮುಂದುವರಿದಲ್ಲಿ ಎಲ್ಲರಿಗೂ ಅನುಕೂಲ ಎಂದು ಸಲಹೆ ನೀಡಿದರು.
ಜಗತ್ತು ಇಂದು ತಾಂತ್ರಿಕತೆ, ಆಧುನಿಕತೆಯ ಪ್ರಭಾವದಿಂದಾಗಿ ವೇಗವಾಗಿ ಬೆಳೆಯುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿಂದು ಲೈವ್ ಹವಾ ಇದೆ. ಮುಂದೇನು ಬರಲಿದೆ ಎನ್ನುವುದು ಈಗ ತಿಳಿಯದು. ಆಗ ನಮ್ಮ ಕ್ಷೇತ್ರದಲ್ಲಿ ಒಂದಷ್ಟು ಸವಾಲು ಎದುರಾಗಬಹುದು. ಅದನ್ನೆಲ್ಲ ದಿಟ್ಟವಾಗಿ ಸ್ವೀಕರಿಸುವ ಮನೋಭಾವ ಮೈಗೂಡಿಸಿಕೊಳ್ಳುವುದು ಅವಶ್ಯ ಎಂದು ವಾಲ್ಟರ್ ಕಿವಿಮಾತು ಹೇಳಿದರು.
ಎಸ್ ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಮಾತನಾಡಿ, ಸಂಘಟನೆಯಿದ್ದಲ್ಲಿ ಒಬ್ಬೊರನ್ನೊಬ್ಬರು ಅರಿತುಕೊಳ್ಳಲು ಸಾಧ್ಯವಾಗುವುದು. ಬಾಂಧವ್ಯ ವೃದ್ಧಿಯಾಗುವುದು. ಬೈಂದೂರಿನಿಂದ ಸುಳ್ಯ ತನಕ ಲೈವ್ ನಡೆಸುತ್ತಿರುವ ಮಾಲಕರು ಒಟ್ಟು ಸೇರಿ ಅಸೋಸಿಯೇಶನ್ ರಚಿಸಿರುವುದು ಶ್ಲಾಘನೀಯ. ಲೈವ್ ಚಾನೆಲ್ ಸಂಸ್ಥೆಗಳು ಎದುರಿಸುವ ಸವಾಲು ನಿವಾರಿಸುವ ನಿಟ್ಟಿನಲ್ಲಿ ರಚನೆಗೊಂಡ ಸಂಘ ಮುಂದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದ ಅವರು, ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಆ ತಂತ್ರಜ್ಞಾನದೊಂದಿಗೆ ನಾವು ಕೂಡ ಬದಲಾಗಬೇಕಿದೆ. ಲೈವ್ ನಲ್ಲೂ ಹೊಸ ಹೊಸ ಆವಿಷ್ಕಾರ ನಡೆಯುತ್ತಿದ್ದು ಅದಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದು ಅನಿವಾರ್ಯ. ದುಬಾರಿ ಕ್ಯಾಮರಾ, ಪರಿಕರಗಳನ್ನು ಹೊಂದುವುದು ಅಗತ್ಯವಾಗಿದ್ದು ಅದಕ್ಕೆ ತಕ್ಕಂತೆ ಆರೋಗ್ಯಕರ ಸ್ಪರ್ಧೆ ಇರಲಿ ಎಂದರು.
ವೇದಿಕೆಯಲ್ಲಿ ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ, ವೈಭವ ಚಾನೆಲ್‌ನ ದಿವ್ಯವರ್ಮಾ ಬಲ್ಲಾಳ್, ಸ್ನೇಹ ಡಿಜಿಟಲ್ ನ ಸಂತೋಷ್ ಹಿರಿಯಡ್ಕ ಉಪಸ್ಥಿತರಿದ್ದರು. ಸಭೆಯಲ್ಲಿ ಮಂಗಳೂರು, ಉಡುಪಿ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ, ಮೂಡುಬಿದಿರೆ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಕಡಬ, ಸುಳ್ಯದಿಂದ ಲೈವ್ ಚಾನೆಲ್ ಸಂಸ್ಥೆ ಹೊಂದಿರುವ ಮಾಲಕರು ಮತ್ತು ವ್ಯವಸ್ಥಾಪಕರು ಉಪಸ್ಥಿತರಿದ್ದರು.