ಕನ್ನಡ ಚಿತ್ರರಂಗದಲ್ಲಿ ಬಲಗೊಳ್ಳುತ್ತಿದೆ ಹೇಮಾ ಆಯೋಗ ಮಾದರಿ ತನಿಖೆಗೆ ಆಗ್ರಹ

ಕನ್ನಡದಲ್ಲೂ ಇದೆ ನಟಿಯರ ಶೋಷಣೆ ಎಂದು ಆರೋಪ

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಶೋಷಣೆ ಕುರಿತಂತೆ ಅಧ್ಯಯನ ನಡೆಸಿದ ಹೇಮಾ ಆಯೋಗದ ವರದಿ ಬಿಡುಗಡೆಯಾದ ಬಳಿಕ ಅಲ್ಲೋಲಕಲ್ಲೋಲ ಉಂಟಾಗಿದ್ದು, ಹಲವು ಸ್ಟಾರ್‌ ನಟರು, ನಿರ್ದೇಶಕರು, ನಿರ್ಮಾಪಕರು ಅತ್ಯಾಚಾರ ಪ್ರಕರಣ ಎದುರಿವಂತಾಗಿದೆ. ಇದೇ ಮಾದರಿಯ ಆಯೋಗವೊಂದು ಕನ್ನಡ ಚಿತ್ರರಂಗದಲ್ಲಿ ನಟಿಯರ ಶೋಷಣೆ ಕುರಿತು ತನಿಖೆ ನಡೆಸಲು ರಚನೆಯಾಗಬೇಕೆಂಬ ಕೂಗು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ.
ಆದರೆ ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ ಸಮಿತಿ ರಚಿಸುವ ಪ್ರಸ್ತಾಪಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ತೀವ್ರ ವಿರೋಧ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗವನ್ನು ನಡುಗಿಸಿದೆ. ಮಾಲಿವುಡ್​​​ನ ಕರಾಳ ಮುಖವನ್ನು ಈ ವರದಿ ಬಲಿಗೆಳೆದಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗಬೇಕೆಂಬ ಬೇಡಿಕೆಗಳು ಕೇಳಿ ಬಂದಿವೆ.

ಕಮಿಟಿ ರಚನೆಗೆ ಇತ್ತೀಚೆಗಷ್ಟೇ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ’ (ಫೈರ್) ನಿಯೋಗ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸೋಮವಾರ ಈ ಬಗ್ಗೆ ಫಿಲ್ಮ್ ಚೇಂಬರ್​ನಲ್ಲಿ ಮಹತ್ವದ ಸಭೆ ನಡೆದಿದ್ದು, ಮಂಡಳಿಯ ಹಲವು ಸದಸ್ಯರು ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.































 
 

ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಚಿತ್ರರಂಗದಲ್ಲಿ ನಟಿಯರ ಶೋಷಣೆ ನಡೆಯುತ್ತಿದೆ. ಕ್ಯಾಸ್ಟಿಂಗ್‌ ಕೌಚ್‌ (ಅವಕಾಶಕ್ಕಾಗಿ ಲೈಂಗಿಕ ಸುಖಕ್ಕೆ ಬೇಡಿಕೆ) ವ್ಯಾಪಕವಾಗಿ ನಡೆಯುತ್ತಿದೆ ಎಂಬ ಆರೋಪ ಬಹುಕಾಲದಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಮೂರು ವರ್ಷದ ಹಿಂದೆ ನ್ಯಾಯಾಧೀಶೆ ಹೇಮಾ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತ್ತು. ಭಾರಿ ಒತ್ತಡದ ಪರಿಣಾಮವಾಗಿ ಇತ್ತೀಚೆಗೆ ಕೇರಳ ಸರಕಾರ ಈ ವರದಿಯನ್ನು ಬಹಿರಂಗಪಡಿಸಿದ್ದು, ಬಳಿಕ ಮಲಯಾಳಂ ಚಿತ್ರರಂಗ ನಡುಗಲಾರಂಭಿಸಿದೆ. ನಟರು, ನಿರ್ದೇಶಕರು, ನಿರ್ಮಾಪಕರಿಂದ ತಮಗಾಗಿರುವ ಕಿರುಕುಳವನ್ನು ನಟಿಯರು ಬಹಿರಂಗಪಡಿಸುತ್ತಿದ್ದಾರೆ. ಜನಪ್ರಿಯ ನಟರಾದ ಸಿದ್ದಿಕ್‌, ಮುಕೇಶ್‌, ನಿವಿನ್‌ ಪೌಲಿ ಮುಂತಾದವರು ಈ ಆರೋಪದ ಸುಳಿಗೆ ಸಿಲುಕಿದ್ದಾರೆ.
ಈಗ ಕನ್ನಡವೂ ಸೇರಿ ಬೇರೆ ಬೇರೆ ಭಾಷೆಯ ಚಿತ್ರರಂಗದವರು ಈ ಮಾದರಿಯ ತನಿಖೆಗೆ ಒತ್ತಾಯಿಸಲಾರಂಭಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top