ಹೊಸದಿಲ್ಲಿ: ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಷಿ ಮರ್ಲೆನಾ ಆಯ್ಕೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಅರವಿಂದ ಕೇಜ್ರಿವಾಲ್ ಇಂದು ನಡೆದ ಮುಖ್ಯಮಂತ್ರಿ ಆಯ್ಕೆ ಸಭೆಯಲ್ಲಿ ಆತಿಷಿ ಮರ್ಲೆನಾ ಅವರ ಹೆಸರನ್ನು ಪ್ರಾಸ್ತಾವಿಸಿದ್ದು ಅದು ವಿರೋಧವಿಲ್ಲದೆ ಅಂಗೀಕಾರಗೊಂಡಿದೆ.
ಈ ಮೂಲಕ ಮತೊಮ್ಮೆ ದಿಲ್ಲಿಗೆ ಮಹಿಳಾ ಮುಖ್ಯಮಂತ್ರಿಯೊಬ್ಬರು ಲಭಿಸಿದಂತಾಗಿದೆ. ಈ ಮೊದಲು ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ದಿಲ್ಲಿ ಮುಖ್ಯಮಂತ್ರಿಯಾಗಿದ್ದರು.
ಕೇಜ್ರಿವಾಲ್ ಸರಕಾರದಲ್ಲಿ ಹಣಕಾಸು, ಶಿಕ್ಷಣ ಮತ್ತಿತರ ಮಹತ್ವದ ಖಾತೆಗಳನ್ನು ನಿಭಾಯಿಸಿದ ಅನುಭವ ಹೊಂದಿರುವ ಆತಿಷಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕೈಲಾಸ್ ಗೆಹ್ಲೋಟ್ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದರೂ ಅದೃಷ್ಟ ಆತಿಷಿಗೆ ಒಲಿದಿದೆ. ಆದೆ ಮುಂದಿನ ಫೆಬ್ರವರಿಯಲ್ಲಿ ದಿಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೀಗಾಗಿ ಆತಿಷಿಗೆ ಸಿಗುವುದು ಬರೀ ಐದು ತಿಂಗಳ ಅಧಿಕಾರ ಮಾತ್ರ.
ಕೇಜ್ರಿವಾಲ್ ಜೈಲು ಪಾಲಾದಾಗ ಆತಿಷಿ ಆಡಳಿತವನ್ನು ನಿಭಾಯಿಸಿದ್ದರು. ಆ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಹಸ್ತಾಂತರವಾಗದಿದ್ದರೂ ಮುಖ್ಯಮಂತ್ರಿಯ ಕಾರ್ಯಭಾರವನ್ನು ಬಹುತೇಕ ನಿಭಾಯಿಸಿದ್ದರು. ಅಲ್ಲದೆ ಕೇಜ್ರಿವಾಲ್ ಜೈಲು ಪಾಲಾದಾಗ ನಡೆದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು.