ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸಭೆ | ಸರಕಾರದಿಂದ ಕಾಲೇಜು ಮಂಜೂರುಗೊಳ್ಳದಿದ್ದರೆ ಪುತ್ತೂರಿನಿಂದ ಬೆಂಗಳೂರಿಗೆ ಜಾಥಾ : ಅಶೋಕ್ ಕುಮಾರ್ ರೈ

ಪುತ್ತೂರು: ಸರಕಾರಿ ಮೆಡಿಕಲ್ ಕಾಲೇಜು ತಂದೇ ಸಿದ್ಧ. ಒಂದು ವೇಳೆ ಸರಕಾರದಿಂದ ಕಾಲೇಜು ಸಿಗದಿದ್ದರೆ ಯಾವುದೇ ಹೋರಾಟಕ್ಕೆ ಸಿದ್ಧವಿದ್ದು, ಪುತ್ತೂರಿನಿಂದ ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಬೆಂಗಳೂರಿಗೆ ಜಾಥಾ ನಡೆಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಮಂಜಲ್ಪಡ್ಪು ಉದಯಗಿರಿ ಹೊಟೇಲ್ ಹಾಲ್‍ ನಲ್ಲಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಶಾಸಕನಾದ ಮೇಲೆ ಪುತ್ತೂರಿನ ಅಭಿವೃದ್ಧಿ ನಿಟ್ಟಿನಲ್ಲಿ ಕೆಲವು ಗುರಿಗಳನ್ನಿಟ್ಟಿದ್ದು, ದ ಉದ್ಯಮ, ಡ್ರೈನೇಜ್, ಪ್ರವಾಸೋದ್ಯಮ, ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಿದ್ದು, ಮೆಡಿಕಲ್ ಕಾಲೇಜು ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದು, ಈಗಾಗಲೇ ಸಿಎಂ ಈ ಕುರಿತು ಮುಂದಿನ ಬಜೆಟ್‍ ನಲ್ಲಿ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಆದರೂ ನಮ್ಮ ಪ್ರಯತ್ನ ಸಾಗಬೇಕು. ಇದಕ್ಕೆ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸಂಘ ಸಂಸ್ಥೆಗಳ ಸಹಕಾರ ಬೇಕು ಎಂದ ಅವರು, ಮುಂದಿನ ಬಜೆಟ್‍ ನಲ್ಲಿ ಯಾವ ರೀತಿ ಪಡೆದುಕೊಳ್ಳುವುದು ಎಂಬುದರ ಕುರಿತು ಚಿಂತಿಸಬೇಕಾಗಿದೆ. ಮುಂದಿನ ಬಜೆಟ್‍ ನಲ್ಲೂ ಸಿಗದಿದ್ದಲ್ಲಿ ಹೋರಾಟವನ್ನು ಬಲಪಡಿಸುವ ಮೂಲಕ ಜಾಥಾದ ಅವಶ್ಯಕತೆಯೂ ಇದೆ ಎಂದು ಹೇಳಿದರು.































 
 

ಹೋರಾಟ ಸಮಿತಿ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಮಾತನಾಡಿ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ತಾಲೂಕಿಗೊಂದು ಶಾಲೆ, ಗ್ರಾಮ, ಸಹಕಾರ ಬ್ಯಾಂಕ್‍ ಎಂಬ ನೆಲೆಯಲ್ಲಿ ಪುತ್ತೂರನ್ನು ಮಾದರಿಯನ್ನಾಗಿ ಮಾಡಿದ್ದರು. ಈ ನಿಟ್ಟಿನಲ್ಲಿ ಪುತ್ತೂರನ್ನು ಕೇಂದ್ರವಾಗಿಟ್ಟುಕೊಂಡು ಮೆಡಿಕಲ್ ಕಾಲೇಜು ಸ್ಥಾಪನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳ ಮಾಜಿ ಶಾಸಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಒಟ್ಟಿಗೆ ಸೇರಿಸಿ ನಮ್ಮ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು.

ವೇದಿಕೆಯಲ್ಲಿ ಹೋರಾಟ ಸಮಿತಿಯ ವಿಶ್ವಪ್ರಸಾದ್ ಸೇಡಿಯಾಪು ಉಪಸ್ಥಿತರಿದ್ದರು. ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಕೇಳಿ ಬಂದ ಜನಾಭಿಪ್ರಾಯ :

ಸಭೆಯಲ್ಲಿ ಉಪಸ್ಥಿತರಿದ್ದ ಜನರಿಂದ ವಿವಿಧ ಅಭಿಪ್ರಾಯಗಳು ಕೇಳಿ ಬಂದವು.

  • ಸಮಿತಿಯನ್ನು ಮತ್ತಷ್ಟು ಬಲಪಡಿಸಲು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಗೌರವಾಧ್ಯಕ್ಷರನ್ನಾಗಿ ಮಾಡುವುದು.
  • ಸುಳ್ಯ, ಬೆಳ್ತಂಗಡಿ, ಪುತ್ತೂರು, ಕಡಬ ಸೇರಿದಂತೆ ಸಮಿತಿಯನ್ನು ವಿಸ್ತರಿಸುವುದು.
  • ಸಮಿತಿಯನ್ನು ವಿಸ್ತರಿಸುವ ಮೂಲಕ ಬಲಪಡಿಸಿ ಎಲ್ಲಾ ಸಮಿತಿಯವರನ್ನು ಸೇರಿಸಿಕೊಂಡು ನಿಯೋಗದಲ್ಲಿ ಮುಖ್ಯಮಂತ್ರಿ ಬಳಿ ತೆರಳಿ ಬೇಡಿಕೆ ಇಡುವುದು.
  • ಈಗಾಗಲೇ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡುವುದು
  • ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವುದು.
  • ಮೊದಲು ಜಿಲ್ಲಾ ಕೇಂದ್ರಕ್ಕೆ ಹೆಚ್ಚಿನ ಒತ್ತು ನೀಡಿ ಬಳಿಕ ಸರಕಾರಿ ಆಸ್ಪತ್ರೆಯನ್ನು 300 ಬೆಡ್‍ ಗೆ ಮೇಲ್ದರ್ಜೆಗೇರಿಸಿ ಬಳಿಕ ಮೆಡಿಕಲ್ ಸ್ಥಾಪನೆಗೆ ರೂಪುರೇಷೆ ಮಾಡುವುದು. ಮುಂತಾದದ ಜನಾಭಿಪ್ರಾಯ ವ್ಯಕ್ತವಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top