ಕಾಂಗ್ರೆಸ್ ನಾಯಕರು ಕೆಂಡಾಮಂಡಲ
ಹೊಸದಿಲ್ಲಿ: ರಾಹುಲ್ ಗಾಂಧಿ ಭಾರತದ ನಂಬರ್ 1 ಭಯೋತ್ಪಾದಕ. ಆತ ಭಾರತೀಯನಲ್ಲ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹೇಳಿರುವುದು ಕಾಂಗ್ರೆಸಿಗರನ್ನು ಕೆರಳಿಸಿದೆ. ಅವರ ಹೇಳಿಕೆಯನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕರು ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಖ್ಖರ ಕುರಿತು ನೀಡಿದ್ದ ಹೇಳಿಕೆ ಖಂಡಿಸುವ ಭರದಲ್ಲಿ ಕೇಂದ್ರ ಸಚಿವ ರವನೀತ್ ನಂಬರ್ 1 ಭಯೋತ್ಪಾದಕ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ದೇಶದ ಬಹುದೊಡ್ಡ ಶತ್ರು. ಅವರನ್ನು ಹಿಡಿದುಕೊಟ್ಟವರಿಗೆ ತಕ್ಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲು ರಾಹುಲ್ ಗಾಂಧಿ ಮುಸ್ಲಿಮರನ್ನು ಬಳಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದು ಆಗಲಿಲ್ಲ. ಈಗ ಅವರು ಸಿಖ್ಖರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿಗೂ ಮೊದಲು ದೇಶದ ಮೋಸ್ಟ್ ವಾಂಟೆಡ್ ವ್ಯಕ್ತಿಗಳು ಈ ಹಿಂದೆ ಇಂತಹ ಹೇಳಿಕೆಗಳನ್ನು ನೀಡಿದ್ದರು. ಭಯೋತ್ಪಾದಕರು ಕೂಡ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಶ್ಲಾಘಿಸಿದ್ದಾರೆ. ಅಂತಹ ಜನರು ರಾಹುಲ್ ಗಾಂಧಿಯನ್ನು ಬೆಂಬಲಿಸುವುದಾದರೆ, ಇವರು ಕೂಡ ದೇಶದ ನಂ.1 ಭಯೋತ್ಪಾದಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ವರ್ಜೀನಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಖ್ಖರ ಉದಾಹರಣೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯ ಕುರಿತು ಹೇಳಿಕೆ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.
ರಾಹುಲ್ ಗಾಂಧಿ ಭಾರತದ ಹೊರಗೆ ಹೆಚ್ಚಿನ ಸಮಯ ಕಳೆದಿದ್ದರಿಂದ ಅವರು ಭಾರತೀಯನಲ್ಲ. ನನ್ನ ಅಭಿಪ್ರಾಯದಲ್ಲಿ ರಾಹುಲ್ ಗಾಂಧಿ ಭಾರತೀಯನಲ್ಲ. ಅವರು ತಮ್ಮ ಹೆಚ್ಚಿನ ಸಮಯವನ್ನು ದೇಶದ ಹೊರಗೆ ಕಳೆದಿದ್ದಾರೆ. ಅವರ ಸ್ನೇಹಿತರು ಮತ್ತು ಕುಟುಂಬದವರು ಅಲ್ಲಿಯೇ ಇದ್ದಾರೆ. ಅದಕ್ಕಾಗಿಯೇ ಅವರು ಎಲ್ಲೋ ಹೋಗುವುದರಿಂದ ತಮ್ಮ ದೇಶವನ್ನು ಹೆಚ್ಚು ಪ್ರೀತಿಸುವುದಿಲ್ಲ. ವಿದೇಶದಲ್ಲಿ ಭಾರತದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಚಾಟಿ ಬೀಸಿದ್ದಾರೆ.
ಭಾರತದಲ್ಲಿ ಹೋರಾಟ ಎಂಬುದು ಕೇವಲ ರಾಜಕೀಯಕ್ಕೆ ಸಂಬಂಧಿಸಿಲ್ಲ. ಒಬ್ಬ ಸಿಖ್ ಪೇಟ ಧರಿಸಲು ಅನುಮತಿ ನೀಡುವುದೇ ಅಥವಾ ಗುರುದ್ವಾರಕ್ಕೆ ಹೋಗಲು ಅನುಮತಿ ಇದೆಯೇ ಎಂಬುದಾಗಿದೆ. ಕೇವಲ ಸಿಖ್ಖರು ಮಾತ್ರವಲ್ಲ, ಎಲ್ಲಾ ಧರ್ಮೀಯರು ಮೂಲಭೂತ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.