ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ವಾಮಾಚಾರ ನಡೆಸಿದ ಶಂಕೆಯಲ್ಲಿ ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು. ಈ ಕುಟುಂಬ ವಾಮಾಚಾರ ನಡೆಸುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಹಾನಿಯಾಗುತ್ತಿದೆ ಭಾವಿಸಿ ಐವರನ್ನು ಥಳಿಸಿ ಹತ್ಯೆ ಮಾಡಿದ್ದಾರೆ. ಸೆಪ್ಟೆಂಬರ್ 15ರಂದು ಗ್ರಾಮದ ಸುಮಾರು 15 ಜನರು ಮನೆಗೆ ನುಗ್ಗಿ ಕುಟುಂಬ ಸದಸ್ಯರೆಲ್ಲರ ಮೇಲೆ ಒಬ್ಬೊಬ್ಬರಾಗಿ ಹಲ್ಲೆ ನಡೆಸಿ ಸಾಯಿಸಿದ್ದಾರೆ ಎನ್ನಲಾಗಿದೆ.
ದೊಣ್ಣೆ, ಕೊಡಲಿಯಿಂದ ತೀವ್ರವಾಗಿ ಥಳಿಸಲಾಗಿದೆ. ಬಳಿಕ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತರನ್ನು ಮೌಸಂ ಕನ್ನಾ, ಆತನ ಪತ್ನಿ ಮೌಸಂ ಬಿರಿ, ಮೌಸಂ ಬಚ್ಚಾ, ಆತನ ಮೌಸಂ ಎರ್ಜೊ, ಮತ್ತು ಇನ್ನೋರ್ವ ಮಹಿಳೆ ಕರ್ಕ ಲಚ್ಚಿ ಎಂದು ಗುರುತಿಸಲಾಗಿದೆ.
ಕಳೆದ ಒಂದು ತಿಂಗಳಿಂದ ಈ ಬುಡಕಟ್ಟು ವಾಸಿಗಳ ಹಳ್ಳಿಯಲ್ಲಿ ಹಲವು ಸಾವುಗಳು ಸಂಭವಿಸಿವೆ. ಇದಕ್ಕೆ ಮೌಸಂ ಕುಟುಂಬದವರು ನಡೆಸುತ್ತಿರುವ ಮಾಟಮಂತ್ರವೇ ಕಾರಣ ಎಂದು ಭಾವಿಸಿ ಅವರನ್ನು ಕಳೆದ ಭಾನುವಾರ ಹೊಡೆದು ಸಾಯಿಸಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿರಣ್ ಜಿ ಚವಾಣ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ. ಬಂಧಿತರೆಲ್ಲ ಅದೇ ಗ್ರಾಮದವರು. ಶಂಕಿತರನ್ನು ಸವ್ಲಾಮ್ ರಾಜೇಶ್ (21), ಸವ್ಲಾಮ್ ಹಿದ್ಮಾ, ಕರಮ್ ಸತ್ಯಂ (35), ಕುಂಜಮ್ ಮುಖೇಶ್ (28) ಮತ್ತು ಪೊಡಿಯಮ್ ಎಂಕಾ ಎಂದು ಗುರುತಿಸಲಾಗಿದೆ.