ಗಾಲ್ಫ್ ಆಡುತ್ತಿರುವಾಗ ಗುಂಡು ಹಾರಿಸಿದ ಬಂದೂಕುದಾರಿ
ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ, ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ಸಾಯಿಸಲು ಇನ್ನೊಂದು ಪ್ರಯತ್ನ ನಡೆದಿದೆ. ಫ್ಲೋರಿಡಾದ ಗಾಲ್ಫ್ ಕ್ಲಬ್ನಲ್ಲಿ ಟ್ರಂಪ್ ಇರುವ ಸ್ಥಳದಲ್ಲಿ ಗುಂಡು ಹಾರಾಟ ನಡೆಸಲಾಗಿದೆ. ಆದರೆ ಈ ಹತ್ಯಾ ಯತ್ನದಿಂದ ಟ್ರಂಪ್ ಸ್ವಲ್ಪದರಲ್ಲೇ ಪಾರಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಮೆರಿಕದ ಗೂಢಚಾರಿಕೆ ಸಂಸ್ಥೆ ಎಫ್ಬಿಐ ಹೇಳಿಕೆ ಬಿಡುಗಡೆ ಮಾಡಿದೆ.
ಗಾಲ್ಫ್ ಕ್ಲಬ್ ಬಳಿ ವ್ಯಕ್ತಿಯೊಬ್ಬ ಬಂದೂಕು ಜೊತೆ ಬಂದು ಗುಂಡು ಹಾರಿಸಿದ್ದಾನೆ. ಅವನನ್ನು ನೋಡಿದ ಕೂಡಲೇ ಭದ್ರತಾ ಸಿಬ್ಬಂದಿ ದಾಳಿ ಮಾಡಿದ್ದಾರೆ. ಓಡಿ ಹೋದ ವ್ಯಕ್ತಿಯನ್ನು ನಂತರ ಬಂಧಿಸಲಾಗಿದ್ದು, ಆತನನ್ನು ರಾಯನ್ ವೆಸ್ಲೆ ರೂತ್ (58) ಎಂದು ಗುರುತಿಸಲಾಗಿದೆ.
ಘಟನೆ ನಡೆದ ಬೆನ್ನಿಗೆ ಟ್ರಂಪ್ ತನ್ನ ಬೆಂಬಲಿಗರಿಗೆ ತಾನು ಸುರಕ್ಷಿತವಾಗಿದ್ದೇನೆ ಹಾಗೂ ಇಂಥ ಬೆದರಿಕೆಗಳಿಗೆಲ್ಲ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಟ್ರಂಪ್ ಗಾಲ್ಫ್ ಆಡುತ್ತಿರುವಾಗ ಗುಂಡು ಹಾರಿಸಲಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದು ಕ್ಲಬ್ನೊಳಗೆ ಕರೆದುಕೊಂಡು ಹೋಗಿದ್ದಾರೆ. ಗುಂಡು ಹಾರಿಸಿದಾತನ ಕೈಯಲ್ಲಿ ಎಕೆ 47 ಹೋಲುವ ಬಂದೂಕು ಇತ್ತು ಮತ್ತು ಆತ ಸುಮಾರು 300 ಗಜ ದೂರಿದಿಂದ ಗುಂಡು ಹಾರಿಸಿದ್ದ. ಆದರೆ ಅದು ಗುರಿ ತಪ್ಪಿದೆ ಎಂದು ಎಫ್ಬಿಐ ಹೇಳಿದೆ.
ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಆತ ತನ್ನ ಬಂದೂಕು, ಬ್ಯಾಗ್ಗಳನ್ನು ಸ್ಥಳದಲ್ಲೇ ಎಸೆದು ಕಾರಿನಲ್ಲಿ ಪಲಾಯನ ಮಾಡಿದ್ದ.
ಎರಡು ತಿಂಗಳ ಹಿಂದೆಯಷ್ಟೇ ಪೆನಿನ್ಸುಲದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವಾಗ ಟ್ರಂಪ್ ಮೇಲೆ ಗುಂಡು ಹಾರಿಸಲಾಗಿತ್ತು. ಟ್ರಂಪ್ ಕಿವಿಗೆ ಗಾಯವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು.