ಲಖನೌ: ಭಾರಿ ಮಳೆಯಿಂದಾಗಿ ಮೂರು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನ ಜಾಕಿರ್ ಕಾಲೋನಿಯಲ್ಲಿ ನಡೆದಿದೆ.
ಇದುವರೆಗೆ ಅಧಿಕಾರಿಗಳು ಒಟ್ಟು ಐವರನ್ನು ಅವಶೇಷಗಳಿಂದ ರಕ್ಷಿಸಿದ್ದಾರೆ. ಬಲಿಯಾದ 10 ಮಂದಿಯಲ್ಲಿ 1 ವರ್ಷದ ಮಗು ಸೇರಿದಂತೆ ನಾಲ್ವರು ಮಕ್ಕಳಿದ್ದರು ಎಂದು ವರದಿಯಾಗಿದೆ.
ಮಳೆಯಿಂದಾಗಿ ಬಿಲ್ಡಿಂಗ್ ಕುಸಿದಿದೆ ಎಂದು ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ ತಿಳಿಸಿದ್ದಾರೆ. ಭಾರಿ ಮಳೆಯ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಸುಮಾರು 35 ವರ್ಷಗಳಷ್ಟು ಹಳೆಯದಾದ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು ಎಂದು ಹೇಳಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.