ಇನ್ನು ಡೆಡ್‌ಲೈನ್ ವಿಸ್ತರಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟನೆ
ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅಂತಿಮ ಗಡು ಭಾನುವಾರಕ್ಕೆ ಮುಕ್ತಾಯವಾಗಲಿದೆ. ಸಾರಿಗೆ ಇಲಾಖೆ ಈ ಹಿಂದೆ ಹೇಳಿದ ಪ್ರಕಾರ ಸೆ.16ರಿಂದ ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಂದ ದಂಡ ವಸೂಲಿ ಪ್ರಕ್ರಿಯೆ ಶುರುವಾಗಬೇಕಿತ್ತು. ಆದರೆ ಸೆ.18ರ ತನಕ ಕಠಿಣ ಕ್ರಮ ಕೈಗೊಳ್ಳದಂತೆ ಸಾರಿಗೆ ಇಲಾಖೆ ಪೊಲೀಸರಿಗೆ ಸೂಚಿಸಿದೆ.
ಇಂದು ಕೂಡ ನೋದಣಿಗೆ ಅವಕಾಶ ಇದ್ದು, ನೋಂದಣಿ ಮಾಡಿಸಿಕೊಂಡವರಿಗೆ ಮುಂದೆ ದಂಡ ಬೀಳುವುದಿಲ್ಲ. ಆದರೆ ಸೆಪ್ಟೆಂಬರ್ 18ರಂದು ಹೈಕೋರ್ಟ್‌ನಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬರಲಿದೆ. ಹೀಗಾಗಿ ಅಲ್ಲಿಯವರೆಗೆ ವಾಹನ ಮಾಲೀಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದು ಬೇಡ ಎಂದು ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್ ಹೇಳಿದ್ದಾರೆ. ನೋಂದಣಿಯ ಅಂತಿಮ ಗಡು ಇನ್ನು ವಿಸ್ತರಣೆಯಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸೋಮವಾರದಿಂದ ದಂಡ ವಿಧಿಸುವುದಾಗಿ ಈಗಾಗಲೇ ಕರ್ನಾಟಕ ಸಾರಿಗೆ ಇಲಾಖೆ ಈಗಾಗಲೇ ಘೋಷಣೆ ಕೂಡ ಮಾಡಿದೆ. ಕರ್ನಾಟಕ ಪೊಲೀಸ್ ಇಲಾಖೆ ಸಂಚಾರ ವಿಭಾಗ, ಸಾರಿಗೆ ಇಲಾಖೆಯವರೂ ಹಳೆ ನಂಬರ್ ಪ್ಲೇಟ್ ಇದ್ದ ವಾಹನದವರಿಗೆ ದಂಡವನ್ನು ವಿಧಿಸಲು ಆರಂಭಿಸಲಿದ್ದಾರೆ. ಆದರೆ ಮೂರು ದಿನದವರೆಗೆ ಕೊಂಚ ರಿಲ್ಯಾಕ್ಸ್ ಇರಲಿದೆ. ನಂಬರ್ ಪ್ಲೇಟ್ ಅಳವಡಿಕೆ ಕುರಿತಾಗಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿದ್ದು, ಅಲ್ಲಿಯವರೆಗೂ ಬಲವಂತದ ದಂಡ ಇರುವುದಿಲ್ಲ ಎನ್ನುವುದು ಸಾರಿಗೆ ಇಲಾಖೆ ನೀಡಿರುವ ಸ್ಪಷ್ಟನೆ.
ಈಗಾಗಲೇ ಎಲ್ಲ ರೀತಿಯ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮೂರು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಈ ಬಾರಿಯೂ ಭಾನುವಾರದವರೆಗೂ ನೋಂದಣಿಗೆ ಅವಕಾಶವಿದೆ. ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರಿಗೆ ಸೆಪ್ಟೆಂಬರ್ 16ರಿಂದ 500 ರೂ. ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸಾರಿಗೆ ನೀಡುವುದಾಗಿ ಸಾರಿಗೆ ಇಲಾಖೆ ಈಗಾಗಲೇ ಹೇಳಿಕೆ ನೀಡಿತ್ತು. ಬುಧವಾರದ ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನವನ್ನು ಸಾರಿಗೆ ಇಲಾಖೆ ಪ್ರಕಟಿಸಲಿದೆ. ಇದರಿಂದ ಮೂರು ದಿನ ದಂಡ ಪ್ರಯೋಗದಿಂದ ವಿನಾಯಿತಿ ಸಿಗಲಿದೆ.
2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್ನಲ್ಲಿ ಹೊರಡಿಸಿತ್ತು. ಆರಂಭದಲ್ಲಿ 2023ರ ನವೆಂಬರ್ 17ರ ಗಡುವನ್ನು ನಿಗದಿಪಡಿಸಲಾಗಿತ್ತು. ನಿಧಾನಗತಿಯ ಅಳವಡಿಕೆಯ ಕಾರಣ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿತ್ತು. ಸಾರಿಗೆ ಇಲಾಖೆ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿರುವ ಹಳೆಯ ಎರಡು ಕೋಟಿ ವಾಹನಗಳ ಪೈಕಿ ಶೇ.26ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ವಾಹನ ಮಾಲೀಕರ ನೀರಸ ಪ್ರತಿಕ್ರಿಯೆಯಿಂದಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವನ್ನು ಈ ಹಿಂದೆ ಮೂರು ಬಾರಿ ವಿಸ್ತರಣೆ ಮಾಡಲಾಗಿದೆ.