ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್‌ಸ್ಟಿಟ್ಯೂಶನ್ಸ್ ಇನ್ನೊವೇಶನ್ ಕೌನ್ಸಿಲ್ ಹಾಗೂ ಗಣಕವಿಜ್ಞಾನ ವಿಭಾಗಗಳ ವತಿಯಿಂದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗೆ ಭಾಗವಹಿಸುವ ಪೂರ್ವತಯಾರಿಯಾಗಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಇಂಟರ್ ನಲ್ ಹ್ಯಾಕಥಾನ್ ಉದ್ಘಾಟಿಸಲಾಯಿತು.
ಮಂಗಳೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕ, ಗ್ಲೆನ್ಸನ್ ಟೋನಿ ಚಾಲನೆ ನೀಡಿ ಮಾತನಾಡಿ, ಭಾರತದ ಉತ್ಕೃಷ್ಟ ಸಂಪನ್ಮೂಲಗಳನ್ನು ಬಳಸಿ ಉನ್ನತ ವಿದ್ಯಾಭ್ಯಾಸ ನಡೆಸಿದ ಅದೆಷ್ಟೋ ಪ್ರತಿಭಾವಂತ ಜನರು ಉದ್ಯೋಗಗಳನ್ನರಸಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಈ ಪ್ರತಿಭಾ ಪಲಾಯನವನ್ನು ತಡೆಗಟ್ಟುವ ಸಲುವಾಗಿ ಸರಕಾರವು ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡಿದೆ. ಯುವಜನರ ಕ್ರಿಯಾಶೀಲತೆಯನ್ನು ಮನಗಂಡು ನಮ್ಮನ್ನು ದಿನನಿತ್ಯ ಕಾಡುವ ಜ್ವಲಂತ ಸಮಸ್ಯೆಗಳಿಗೆ ತಾಂತ್ರಿಕ ರೂಪದ ಪರಿಹಾರ ಕಂಡುಕೊಳ್ಳಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಅನ್ನು ಆಯೋಜಿಸಿ ಯುವ ಪ್ರತಿಭೆಗಳಿಗೆ ತಮ್ಮ ಕ್ರಿಯಾತ್ಮಕತೆಯನ್ನು ಮೂರ್ತರೂಪಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಎಸ್ ಎ ಪಿ ಲ್ಯಾಬ್ಸ್‌ನಲ್ಲಿ ಹಿರಿಯ ಪ್ರೊಡಕ್ಟ್ ಸೆಕ್ಯುರಿಟಿ ಸ್ಪೆಷಲಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಣಿತಾ ಕೆ.ಎಸ್. ಶುಭ ಹಾರೈಸಿದರು. ಕಾಲೇಜಿನ ಐಐಸಿ ಸಂಯೋಜಕ ಅಭಿಷೇಕ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಸುರಭಿ ಮತ್ತು ಬಳಗ ಪ್ರಾರ್ಥಿಸಿದರು. ಐಐಸಿಯ ಸಂಯೋಜಕಿ ಗೀತಾ ಪೂರ್ಣಿಮಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ವಂದಿಸಿದರು. ಉಪನ್ಯಾಸಕಿ ಸುರಕ್ಷಾ ಎಸ್. ಕಾರ್ಯಕ್ರಮ ನಿರೂಪಿಸಿದರು.