ಢಾಕಾ: ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸಿಲ್ಲ ಎಂದು ನಡುರಸ್ತೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸಿದ್ಧ ಕಾಕ್ಸ್ ಬಜಾರ್ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದ್ದು, ಬಾಂಗ್ಲಾದೇಶ ಇನ್ನೊಂದು ಅಫಘಾನಿಸ್ಥಾನವಾಗುತ್ತಿದೆ ಎಂದು ಆತಂಕ ವ್ಯಕ್ತವಾಗಿದೆ.
ಹಿಜಾಬ್ ಧರಿಸದ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪುರುಷರ ಗುಂಪೊಂದು ದಾಳಿ ನಡೆಸುತ್ತಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ವಿಡಿಯೋಗಳಲ್ಲಿ ಕಾಣಿಸುತ್ತಿದೆ. ಓರ್ವ ಮಹಿಳೆಯನ್ನು ದೊಣ್ಣೆಯಿಂದ ಥಳಿಸಲಾಗಿದ್ದು, ಮತ್ತೋವ್ರ ಮಹಿಳೆಗೆ ಸಿಟ್-ಅಪ್ ಶಿಕ್ಷೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಮೂಲಭೂತವಾದ ಮತ್ತು ಉಗ್ರಗಾಮಿ ಮನಸ್ಥಿತಿ ಬೆಳೆಯುವುತ್ತಿರುವುದಕ್ಕೆ ಈ ವಿಡಿಯೋಗಳು ಸಾಕ್ಷಿ ಎನ್ನಲಾಗಿದೆ. ಅನೇಕರು ಪರಿಸ್ಥಿತಿಯನ್ನು ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ಥಾನಕ್ಕೆ ಹೋಲಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಅಸ್ಥಿರ ರಾಜಕೀಯ ವಾತಾವರಣದ ಮಧ್ಯೆ ಈ ದಾಳಿ ನಡೆದಿದೆ, ಅಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಉಚ್ಚಾಟನೆ ಸೇರಿದಂತೆ ಇತ್ತೀಚಿನ ರಾಜಕೀಯ ಬದಲಾವಣೆಗಳು ಅಶಾಂತಿ ಮತ್ತು ಅನಿಶ್ಚಿತತೆಗೆ ಕಾರಣವಾಗಿವೆ.