ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗ ಮತ್ತುಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು.
ಸುಳ್ಯ ಎನ್ಎಂಸಿ ಕಾಲೇಜು ಪ್ರಾಂಶುಪಾಲ ಮಿಥಾಲಿ ಪಿ. ರೈ ಸಮಾರಂಭದ ಉದ್ಘಾಟಿಸಿ ಮಾತನಾಡಿ, ಭಾರತದ ರಾಷ್ಟ್ರ ಭಾಷೆ ಹಿಂದಿಯಾದರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಭಾಷೆ ಇಂಗ್ಲೀಷ್ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಮಾತೃಭಾಷೆಯ ರೀತಿ ಸರಳವಾಗಿ ಇಂಗ್ಲೀಷ್ ಮಾತನಾಡಲು ಕಲಿಯುವುದು ಅತೀ ಅಗತ್ಯ. ಭಾಷೆಯನ್ನು ನಿರಂತರವಾಗಿ ಕೇಳುವುದು, ಬರೆಯುವುದು, ಓದುವುದರಿಂದ ಮತ್ತು ಮಾತನಾಡುವುದರಿಂದ ಕಲಿಯಬಹುದು. ಬಹುಭಾಷೆಯ ಮೇಲಿನ ಹಿಡಿತ ವ್ಯಾವಹಾರಿಕ ಮತ್ತು ಉದ್ಯೋಗ ದೃಷ್ಟಿಯಿಂದ ಪ್ರಸ್ತುತ ಸನ್ನಿವೇಶದಲ್ಲಿ ಅನಿವಾರ್ಯ. ಪ್ರಸ್ತುತ ವಿದ್ಯಾರ್ಥಿಗಳಿಗೆ ತಮ್ಮ ಪದವಿ ಶಿಕ್ಷಣದೊಂದಿಗೆ ಸರಳವಾಗಿ ಇಂಗ್ಲೀಷ್ ಮಾತನಾಡಲು ಕಲಿಯುವ ಅವಕಾಶವನ್ನು ಉಚಿತವಾಗಿ ಪ್ರತ್ಯೇಕ ತರಗತಿಗಳ ಮೂಲಕ ನೀಡುತ್ತಿರುವುದು ಔಚಿತ್ಯ ಮತ್ತು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು .
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಸಂಪತ್ ಪಕ್ಕಳ, ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಜೊತೆಗೆ ಸರಳವಾಗಿ ಮತ್ತು ಸುಲಭ ರೀತಿಯಲ್ಲಿ ಇಂಗ್ಲೀಷ್ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಂಡು ಸಂವಹನ ತೊಡಕುಗಳನ್ನು ನಿವಾರಿಸಿಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಪಡೆಯಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಎ. ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ರಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕಿ ದೀಪ್ತಿ ಎ.ಸಿ. ಉದ್ಘಾಟಕರ ಕಿರು ಪರಿಚಯ ಮಾಡಿದರು. ವಿದ್ಯಾರ್ಥಿನಿಯರಾದ ಪ್ರಕೃತಿ ಪ್ರಾರ್ಥನೆ ಹಾಡಿದರು. ಜೆನ್ನಿಫರ್ ಡಿಸೋಜಾ ವಂದಿಸಿದರು. ಹಲಿ ಮತ್ಮುಖ್ಸಾನಾ ಕಾರ್ಯಕ್ರಮ ನಿರೂಪಿಸಿದರು