ಶ್ರೀನಗರ: ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇನ್ನಿಬ್ಬರಿಗೆ ಗಾಯಗಳಾಗಿವೆ.
ಇನ್ನೊಂದು ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ನಿರ್ದಿಷ್ಟ ಮಾಹಿತಿಯ ಆಧಾರದಲ್ಲಿ ಜಮ್ಮು-ಕಾಶ್ಮೀರದ ಪೊಲೀಸರು ಹಾಗೂ ಸೇನೆ ಕಿಶ್ತ್ವಾರ್ ಜಿಲ್ಲೆಯ ಚಾಟ್ರೂ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿತ್ತು. ದಿನವಿಡೀ ಶೋಧಕಾರ್ಯ ಮುಂದುವರಿದಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ಅಡಗಿರುವ ಉಗ್ರರನ್ನು ಪತ್ತೆಹಚ್ಚಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಗ್ರರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದವರ ವಿರುದ್ಧ ಗುಂಡಿನ ದಾಳಿ ನಡೆಸಿದ್ದಾರೆ. ಆಗ ನಡೆದ ಕಾಳಗದಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ.
ಜೂನಿಯರ್ ಕಮಿಷನ್ಡ್ ಆಫೀಸರ್ ವಿಪುನ್ ಕುಮಾರ್ ಮತ್ತು ಸಿಪಾಯಿ ಅರವಿಂದ ಸಿಂಗ್ ಹುತಾತ್ಮರಾಗಿರುವ ಯೋಧರು. ಕಾಡಿನೊಳಗಿರುವ ಉಗ್ರರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಬಾರಾಮುಲ್ಲಾದ ಬಸಂತ್‌ಗಢ್ ಎಂಬಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರರನ್ನು ಸಾಯಿಸಲಾಗಿದೆ.