ಪುತ್ತೂರು: ಜಿಲ್ಲೆಯ 2ನೇ ಅತೀ ಹಿರಿಯ ಗಣಪ ಎಂದೇ ಖ್ಯಾತಿ ಪಡೆದಿರುವ ಪುತ್ತೂರಿನ ಶ್ರೀ ದೇವತಾ ಸಮಿತಿ ವತಿಯಿಂದ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ 68ನೇ ವರ್ಷದ ಶ್ರೀ ಗಣೇಶೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಇಂದು ರಾತ್ರಿ ಸಂಪನ್ನಗೊಳ್ಳಲಿದೆ.
ತುಳುನಾಡ ದೈವಾರಾಧನೆಯ ನಂಟು ಹೊಂದಿರುವ ಕಿಲ್ಲೆ ಗಣಪನಿಗೆ ಶುಕ್ರವಾರ ಮಧ್ಯಾಹ್ನ 108 ಕಾಯಿ ಗಣಪತಿ ಹೋಮ ನಡೆಯಿತು. ಬಳಿಕ ಶ್ರೀ ಗಣೇಶನ ಮೂರ್ತಿಯೊಂದಿಗೆ ವೈಭವದ ಬಲಿ ಉತ್ಸವ ಚೆಂಡೆ, ಸ್ಕ್ಯಾಕ್ಸೊಫೋನ್ ನೊಂದಿಗೆ ವಿಜೃಂಭಣೆಯಿಂದ ಜರಗಿತು. ಬಳಿಕ ಮಹಾಪೂಜೆ ನಡೆದು ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು. ಬಳಿಕ ಮಧ್ಯಾಹ್ನ 2ರಿಂದ ಕೀರ್ತಿಶೇಷ ಚಿದಾನಂದ ಕಾಮತ್ ಕಾಸರಗೋಡು ಅವರ ಸಾಂಸ್ಕೃತಿಕ ಕಲಾ ಕೇಂದ್ರ ಬಾರಿಸು ಕನ್ನಡ ಡಿಂಡಿಮ ಬಳಗ ಪುತ್ತೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇಂದು ಸಂಜೆ ವೈಭವದ ಶೋಭಾಯಾತ್ರೆ:
ಸಂಜೆ ಶ್ರೀ ಗಣೇಶನ ವೈಭವದ ಶೋಭಾತ್ರೆ ಹೊರಡುವ ಮೊದಲು ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವದ ಭೂತಕೋಲ ನಡೆಯಲಿದೆ. ಬಳಿಕ ಕಿಲ್ಲೆ ಗಣಪನ ಶೋಭಾಯಾತ್ರೆ ಕೋರ್ಟು ರಸ್ತೆಯಯಲ್ಲಿ ಸಾಗಿ ಮುಖ್ಯರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಆಫೀಸು ರಸ್ತೆ, ರಾಧಾಕೃಷ್ಣ ಮಂದಿರ, ಬೊಳುವಾರಿಗೆ ಬಂದು ಅಲ್ಲಿಂದ ಮಂಜಲ್ಪಡ್ಪು ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹ ವಿಸರ್ಜನೆ ನಡೆಯಲಿದೆ.