ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟಿಪ್ಪು, ಔರಂಗಜೇಬನ ಸಂತತಿ ಜನನ ಎಂದು ಆಕ್ರೋಶ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆಯನ್ನು ಗೃಹ ಸಚಿವ ಪರಮೇಶ್ವರ್ ಸಣ್ಣ ಘಟನೆ ಎಂದು ಹೇಳುತ್ತಾರೆ. ನಿಮ್ಮ ಮನೆ ರೋಡ್‍ನಲ್ಲಿ ಯಾರಾದ್ರೂ ಗಣೇಶ ಕೂರಿಸಿದಾಗ ಅಲ್ಲಿ ಯಾರಾದ್ರೂ ಕಲ್ಲು ಹೊಡೆದ್ರೆ, ಬೆಂಕಿ ಹಾಕಿದ್ರೆ ಸಣ್ಣ ಘಟನೆ ಎಂದು ಹೇಳುತ್ತೀರಾ? ನಿಮ್ಮ ಮನೆಗೆ ಬೆಂಕಿ ಬೀಳುವವರೆಗೂ ನಿಮಗೆ ಘಟನೆ ಬಗ್ಗೆ ಗೊತ್ತಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಕರ್ನಾಟಕದಲ್ಲಿ ಸಂವಿಧಾನದ ಪ್ರಕಾರ ಕಾನೂನು ನಡೆಯುತ್ತಿದೆಯಾ? ಷರಿಯಾ ಪ್ರಕಾರ ಕಾನೂನು ನಡೆಯುತ್ತಿದೆಯಾ? ಗಣೇಶನ ಕೂರಿಸೋಕು ಕರ್ನಾಟಕದಲ್ಲಿ ಸಾಧ್ಯವಿಲ್ಲವಾ? ಬಾಂಗ್ಲಾ ಸರ್ಕಾರ, ಕರ್ನಾಟಕ ಸರ್ಕಾರಕ್ಕೆ ಇರೋ ವ್ಯತ್ಯಾಸ ಏನು? ನೀವು ತುಷ್ಟೀಕರಣ ನೀತಿ ಮಾಡಿ, ಗಣೇಶ ಕೂರಿಸಿದರೆ ನೀವು ಬೆಂಕಿ ಹಾಕಿಸಿ ಕಲ್ಲು ಹೊಡೆಸುತ್ತಿದ್ದೀರಿ ಎಂದಿದ್ದಾರೆ.
ಬೆಂಕಿ ಹಾಕಿದ ಟೆರರಿಸ್ಟ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಯುವಕರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಇದೇ ರೀತಿ ಅಮಾಯಕರ ಮೇಲೆ ಕ್ರಮಕ್ಕೆ ಮುಂದಾದ್ರೆ ಬಿಜೆಪಿ ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಜಾಬ್ ವಿವಾದ ಸೃಷ್ಟಿಸಿದ್ದ ಕಾಲೇಜಿನ ವಿದ್ಯಾರ್ಥಿಗಳ ನಡೆ ಖಂಡಿಸಿದ್ದ ಶಿಕ್ಷಕರಿಗೆ ಘೋಷಿಸಿದ್ದ ಪ್ರಶಸ್ತಿಯನ್ನು ಎಸ್‍ಡಿಪಿಐ ವಿರೋಧ ಮಾಡಿದ್ದಕ್ಕೆ ಪ್ರಶಸ್ತಿಯನ್ನು ರದ್ದು ಮಾಡಿದ್ದಾರೆ. ಈ ಸರ್ಕಾರ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಗೆ ಶರಣಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು