1ರಿಂದ 23ರ ವರೆಗಿನ ಆರೋಪಿಗಳೆಲ್ಲ ಹಿಂದುಗಳು ಎಂದು ಆರೋಪ
ಮಂಡ್ಯ: ನಾಗಮಂಗಲ ಗಲಭೆ ಪ್ರಕರಣದಲ್ಲಿ ಪೊಲೀಸರು ಹಿಂದುಗಳ ಮೇಲೇಯೇ ಕೇಸ್ ಹಾಕುತ್ತಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಗಳ ಪೈಕಿ ಎ1ನಿಂದ ಎ23 ವರೆಗಿನ ಆರೋಪಿಗಳು ಹಿಂದೂಗಳೇ ಆಗಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದು, ಇದು ಮುಸ್ಲಿಮ್ ಒಲೈಕೆಯ ಪರಾಕಾಷ್ಠೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಸಹಿತ ಹಲವು ನಾಯಕರು ಕಿಡಿಕಾರಿದ್ದಾರೆ.
ಗಲಭೆ ನಡೆದ ಬಳಿಕ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಆರ್ ಅಶೋಕ್, ಸಿಟಿ ರವಿ, ಅಶ್ವತ್ಥನಾರಾಯಣ, ನಾರಾಯಣ ಗೌಡ, ಪ್ರತಾಪ್ ಸಿಂಹ ಸೇರಿ ಹಲವು ಕಲವು ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿ ಅವಲೋಕಿಸಿ, ಗಣೇಶೋತ್ಸವದ ಆಯೋಜಕರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕರು ಗಣೇಶನನ್ನು ಕೂರಿಸಿದ್ದು ಹಿಂದೂಗಳು ಕಲ್ಲು ತೂರಿದ್ದು ಮುಸ್ಲಿಮ್ ಯುವಕರು. ಆದರೆ ಪೊಲೀಸರ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂಗಳನ್ನು ಬಂಧನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಲ್ಲು ತೂರಿದವರನ್ನು ಮೊದಲು ಆರೋಪಿಗಳನ್ನಾಗಿ ಮಾಡಬೇಕಿತ್ತು. ಆದರೆ ಗಣೇಶೋತ್ಸವ ಮಾಡಿದವರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಅಲ್ಪಸಂಖ್ಯಾರ ಓಲೈಕೆಗಾಗಿ ಹಿಂದೂ ಯುವಕರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಅಮಾಯಕರು ಬಲಿಯಾಗಿದ್ದಾರೆ. ಮೆರವಣಿಗೆ ತಡೆದು ಗಲಾಟೆ ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ?
ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದಾರೆ. ಹಿಂದೆ ಕೆರಗೋಡಿನಲ್ಲಿ ಹನುಮ ಧ್ವಜ ವಿರೋಧ ಮಾಡಿದರು. ಈಗ ಗಣಪತಿ ಮೆರವಣಿಗೆ ವಿಚಾರದಲ್ಲಿ ಪೊಲೀಸರು ಭದ್ರತೆ ನೀಡಬೇಕಿತ್ತು. ಪೊಲೀಸರ ಮುಂದೆಯೇ ಕಲ್ಲು ತೂರಾಟ, ಬೆಂಕಿ ಹಚ್ಚಿದ್ದರೂ ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ನಾಯಕರು ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
53 ಮಂದಿ ಅರೆಸ್ಟ್
ಗಲಭೆ ಪ್ರಕರಣ ಸಂಬಂಧ 150 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು 53 ಮಂದಿಯನ್ನು ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.