70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್‌ನಲ್ಲಿ 5 ಲ. ರೂ. ಆರೋಗ್ಯ ವಿಮೆ

6 ಕೋಟಿ ಹಿರಿಯರಿಗೆ ಕೇಂದ್ರದ ಕೊಡುಗೆ

ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಯೋಜನೆಯ ಕುರಿತಂತೆ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. 70 ವರ್ಷ ಮೇಲ್ಪಟ್ಟ ಎಲ್ಲ ವೃದ್ಧರು ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆಯನ್ನು ಪಡೆಯಲಿದ್ದು, ಇದು ಹಿರಿಯರಿಗೆ ಕೇಂದ್ರ ನೀಡಿದ ಬಹಳ ದೊಡ್ಡ ಕೊಡುಗೆಯಾಗಿದ್ದು, ಬಿಜೆಪಿ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿದೆ.

ಮೊದಲು ಈ ಯೋಜನೆ ಎಲ್ಲ ವರ್ಗದ ಹಿರಿಯರನ್ನು ಒಳಗೊಂಡಿರಲಿಲ್ಲ. ಈಗ 70 ವರ್ಷ ಮೇಲ್ಪಟ್ಟ ಎಲ್ಲ ವೃದ್ಧರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರನ್ನು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ (AB PM-JAY) ಸೇರಿಸಲಾಗುತ್ತದೆ. ಈ ಕ್ರಮದಿಂದ ಸುಮಾರು 4.5 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. ಈ ಕುಟುಂಬಗಳಲ್ಲಿ 6 ಕೋಟಿ ವೃದ್ಧರಿದ್ದಾರೆ. ಅವರು ಕುಟುಂಬವನ್ನು ಅವಲಂಬಿಸಿ 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆಯನ್ನು ಪಡೆಯಲಿದ್ದಾರೆ.
ಎಲ್ಲ ಹಿರಿಯ ನಾಗರಿಕರು, ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ, AB PM-JAY ಪ್ರಯೋಜನಗಳನ್ನು ಪಡೆಯಲು ಅರ್ಹರಾಗುತ್ತಾರೆ. ಅರ್ಹ ಹಿರಿಯ ನಾಗರಿಕರಿಗೆ AB PM-JAY ಅಡಿಯಲ್ಲಿ ಹೊಸ ಪ್ರತ್ಯೇಕ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ AB PM-JAY ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಸೇರಿದ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವರ್ಷಕ್ಕೆ 5 ಲಕ್ಷದವರೆಗೆ ಹೆಚ್ಚುವರಿ ಟಾಪ್-ಅಪ್ ಕವರ್ ಅನ್ನು ಪಡೆಯಲಿದ್ದಾರೆ.
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS), ಮಾಜಿ ಸೈನಿಕರ ಆರೋಗ್ಯ ಯೋಜನೆ (ECHS), ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಮುಂತಾದ ಇತರ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳ ಪ್ರಯೋಜನಗಳನ್ನು ಈಗಾಗಲೇ ಪಡೆಯುತ್ತಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಅಸ್ತಿತ್ವದಲ್ಲಿರುವ ಯೋಜನೆ ಅಥವಾ AB PMJAY ಅನ್ನು ಆರಿಸಿಕೊಳ್ಳಿಬಹುದು. ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಪ್ರಯೋಜನಗಳನ್ನು ಪಡೆಯುತ್ತಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು AB PM-JAY ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top