ಉಗ್ರರ ದಾಳಿಗೆ ಹೆದರಿ ಲಾಲ್ ಚೌಕದಲ್ಲಿ ತಿರುಗಾಡಲಿಲ್ಲ ಎಂದ ಶಿಂಧೆ
ಹೊಸದಿಲ್ಲಿ : ಕೇಂದ್ರದ ಮಾಜಿ ಗೃಹ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆಗಿದ್ದ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಹೇಳಿದ ಮಾತೊಂದು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನಿಲುವನ್ನು ಬೆತ್ತಲಾಗಿಸಿದೆ. ಕೇಂದ್ರ ಗೃಹ ಸಚಿವನಾಗಿದ್ದಾಗ ನನಗೆ ಕಾಶ್ಮೀರಕ್ಕೆ ಭೇಟಿ ನೀಡಲು ಭಯವಾಗುತ್ತಿತ್ತು, ಶ್ರೀನಗರದ ಲಾಲ್ ಚೌಕ್‌ನಲ್ಲಿ ನಡೆದಾಡಲು ಹೆದರುತ್ತಿದ್ದೆ. ಯಾವ ಕ್ಷಣದಲ್ಲೂ ಉಗ್ರರು ದಾಳಿ ಮಾಡುವ ಆತಂಕವಿತ್ತು ಎಂದು ಹೇಳಿ ಶಿಂಧೆ ಕಾಂಗ್ರೆಸ್‌ನ ಬಂಡವಾಳವನ್ನು ಬಯಲು ಮಾಡಿದ್ದಾರೆ.
ತಮ್ಮ ಜೀವನ ಚರಿತ್ರೆ ‘ಫೈವ್ ಡಿಕೇಡ್ಸ್ ಇನ್ ಪಾಲಿಟಿಕ್ಸ್’ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಅವರು, ನಾನು ಕೇಂದ್ರ ಗೃಹ ಸಚಿವನಾಗಿದ್ದಾಗ ಶಿಕ್ಷಣ ತಜ್ಞ ವಿಜಯ್ ದಾರ್ ಶ್ರೀನಗರದ ಲಾಲ್ ಚೌಕ್ ಬಳಿ ಭಾಷಣ ಮಾಡುವಂತೆ ಹೇಳಿದ್ದರು. ಉಗ್ರರ ಉಪಟಳ ಹೆಚ್ಚಿದ್ದ ಕಾರಣ ಎಲ್ಲೆಂದರಲ್ಲಿ ನಡೆದಾಡದಂತೆ ಎಚ್ಚರಿಕೆ ನೀಡಿದ್ದರು. ಅಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ವಿಪರೀತ ಭಯವಾಗಿತ್ತು. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳಲು ಆಗುತ್ತಿರಲಿಲ್ಲ ಎಂದಿದ್ದಾರೆ.
370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತ ಬಹಳಷ್ಟು ಸುಧಾರಣೆಯಾಗಿ, ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ಲಾಲ್ ಚೌಕದಲ್ಲಿ ತಿರುಗಾಡಬೇಡಿ, ಜನರನ್ನು ಭೇಟಿಯಾಗಿ ವಾಪಸು ಬನ್ನಿ ಎಂದು ದಾರ್ ಸಲಹೆ ಮಾಡಿದ್ದರು. ಅದರಂತೆ ನಾನು ಜನರನ್ನು ಭೇಟಿ ಮಾಡಿದೆ. ಆಗ ಜನರು ನಾನು ಬಹಳ ದಿಟ್ಟ ಗೃಹ ಸಚಿವ ಎಂದು ಹೊಗಳಿದರು. ಆದರೆ ನನಗೆ ಒಳಗೊಳಗೆ ಭಯೋತ್ಪಾದಕರ ದಾಳಿಯಾಗುವ ಭಯವಾಗುತ್ತಿತ್ತು ಎಂದು ವಾಸ್ತವ ವಿಚಾರವನ್ನು ಶಿಂಧೆ ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಕಾಲೆಳೆದ ಬಿಜೆಪಿ
ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ,‘ಮಾಜಿ ಗೃಹ ಸಚಿವರ ಹೇಳಿಕೆ ಕಾಂಗ್ರೆಸ್ ಬಂಡವಾಳವನ್ನು ಎಳೆಎಳೆಯಾಗಿ ಬಿಡಿಸಿದೆ. ಕಾಂಗ್ರೆಸ್ ತನ್ನ 10 ವರ್ಷದ ಅವಧಿಯಲ್ಲಿ ಜಮ್ಮು-ಕಾಶ್ಮೀರವನ್ನು ಹೇಗೆ ಇಟ್ಟುಕೊಂಡಿತ್ತು ಎಂದು ಇದರಲ್ಲಿ ತಿಳಿಯುತ್ತದೆ’ ಎಂದು ಟಾಂಗ್ ನೀಡಿದೆ.
ವ್ಯತ್ಯಾಸ ಬಹಳ ಸ್ಪಷ್ಟವಾಗಿದೆ, ಯುಪಿಎ ಕಾಲದಲ್ಲಿ ಕೇಂದ್ರದ ಗೃಹ ಸಚಿವರಿಗೂ ಕಾಶ್ಮೀರಕ್ಕೆ ಭೇಟಿ ನೀಡಲು ಭಯವಾಗುತ್ತಿತ್ತು, ಎನ್‌ಡಿಎ ಆಡಳಿತದಲ್ಲಿ ವರ್ಷಕ್ಕೆ 3 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಹೋಗುತ್ತಿದ್ದಾರೆ. 370 ವಿಧಿ ರದ್ದಾದ ಬಳಿಕ ಪರಿಸ್ಥಿತಿ ಸುಧಾರಿಸಿದೆ ಎನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಕು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಕಾಶ್ಮೀರವನ್ನು ಮರಳಿ ಭಯೋತ್ಪಾದನೆಯ ಯುಗಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿವೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.