ವಾಷಿಂಗ್ಟನ್‌ನಲ್ಲಿ ರಾಹುಲ್-ಡಿಕೆಶಿ ಭೇಟಿ ಬಳಿಕ ಗರಿಗೆದರಿದ ಕುತೂಹಲ
ಬೆಂಗಳೂರು : ಕಾಂಗ್ರೆಸಿನೊಳಗೆಯೇ ಮುಖ್ಯಮಂತ್ರಿ ಬದಲಾವಣೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅಮೆರಿಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಅನೇಕ ಊಹಾಪೋಹಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ತಾನು ಮತ್ತು ರಾಹುಲ್ ಗಾಂಧಿ ಏಕಕಾಲದಲ್ಲಿ ಅಮೆರಿಕ ಪ್ರವಾಸ ಕೈಗೊಂಡಿರುವುದು ಕಾಕತಾಳೀಯ, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಅಮೆರಿಕಕ್ಕೆ ಹೋಗುವ ಮೊದಲೇ ಸ್ಪಷ್ಟನೆ ನೀಡಿದ್ದರೂ ಹೀಗೆ ಕಾರಣವಿಲ್ಲದೆ ಯಾವುದೇ ನಡೆಯನ್ನು ಡಿಕೆಶಿ ಇಡುವವರಲ್ಲ ಎಂದು ಅವರನ್ನು ಬಲ್ಲವರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ರಾಜ್ಯ ರಾಜಕೀಯದಲ್ಲಿ ದೊಡ್ಡದೊಂದು ಬದಲಾವಣೆಗೆ ಈ ಭೇಟಿ ಮುನ್ನುಡಿಯಾಗಲಿದೆಯೇ ಎಂಬ ಕುತೂಹಲ ಕೆರಳಿದೆ.
ಒಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಡಾ ಹಗರಣಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ ಸಿದ್ದರಾಮಯ್ಯನವರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದ್ದು, ಗುರುವಾರ ಹೈಕೋರ್ಟ್‌ನಲ್ಲಿ ನಡೆಯುವ ಅಂತಿಮ ವಿಚಾರಣೆ ಅವರ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ.
ಇದೇ ಅವಕಾಶ ಎಂದು ಭಾವಿಸಿ ಕಾಂಗ್ರೆಸ್‌ನ ಅನೇಕ ಆಕಾಂಕ್ಷಿಗಳು ಮುಖ್ಯಮಂತ್ರಿ ಹುದ್ದೆಗಾಗಿ ತಮ್ಮ ಹೆಸರನ್ನು ತೇಲಿಬಿಟ್ಟಿದ್ದಾರೆ. ಆರ್. ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್ ಸೇರಿ ಸುಮಾರು ಒಂದು ಡಜನ್ ನಾಯಕರು ಖುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಅರ್ಥಾತ್ ಒಂದು ವೇಳೆ ಸಿದ್ದರಾಮಯ್ಯನವರು ಕೆಳಗಿಳಿಯುವ ಪರಿಸ್ಥಿತಿ ಬಂದರೂ ತನ್ನ ಹಾದಿ ಸುಗಮವಾಗಿಲ್ಲ ಎನ್ನುವುದು ಡಿಕೆಶಿಗೆ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅಮೆರಿಕ ಪ್ರವಾಸವನ್ನು ವಿಶೇಷವಾಗಿ ವಿಶ್ಲೇಷಿಲಾಗುತ್ತಿದೆ.
ರಾಹುಲ್ ಗಾಂಧಿಯವರನ್ನು ವಾಷಿಂಗ್ಟನ್‌ನಲ್ಲಿ ಡಿ.ಕೆ ಶಿವಕುಮಾರ್ ನಿನ್ನೆ ಭೇಟಿ ಮಾಡಿದ್ದಾರೆ. ಈ ಫೊಟೊಗಳನ್ನು ಅವರ ಟೀಮ್ ಬಿಡುಗಡೆಗೊಳಿಸಿದೆ. ಈ ಮೂಲಕ ಡಿಕೆಶಿ ಕುರ್ಚಿ ಆಕಾಂಕ್ಷಿಗಳಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ರಾಜಕೀಯದಲ್ಲಿ ನಾಯಕರ ಎಲ್ಲ ಭೇಟಿಗಳಿಗೂ ವಿಶೇಷವಾದ ಕಾರಣ ಇದ್ದೇ ಇರುತ್ತದೆ. ಅದು ಸೌಹಾರ್ದ ಎಂದು ಅವರು ಹೇಳಿಕೊಂಡರೂ ಸೌಹಾರ್ದದ ಹಿಂದೆ ಉದ್ದೇಶವೂ ಇರುತ್ತದೆ ಎಂಬುದು ರಾಜಕೀಯದ ಮರ್ಮ ಗೊತ್ತಿದ್ದವರಿಗೆ ತಿಳಿದಿರುವ ವಿಚಾರವೇ. ಹೀಗಾಗಿ ಡಿಕೆಶಿಯ ಅಮೆರಿಕ ಪ್ರವಾಸ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.