ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಈ ಹಿಂದೆ ಪೂರ್ವಸಿದ್ಧತಾ ಮತ್ತು ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ರೂಪಿಸಿ ಕೊಡಲಾಗುತ್ತಿತ್ತು. ಈ ವರ್ಷದಿಂದ ಮಧ್ಯವಾರ್ಷಿಕ ಪರೀಕ್ಷೆಗೂ ಪ್ರಶ್ನೆ ಪತ್ರಿಕೆ ರೂಪಿಸಿ ಆನ್‌ಲೈನ್ ಮೂಲಕ ರವಾನಿಸುವ ಮಹತ್ವದ ನಿರ್ಧಾರ ಮಾಡಿದೆ. ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಕೆಲವೇ ದಿನಗಳು ಬಾಕಿ ಇೃವಾಗ ಇಲಾಖೆ ಈ ನಿರ್ಧಾರಕ್ಕೆ ಕೈಗೊಂಡಿರುವುದು ವಿರೋಧಕ್ಕೆ ಕಾರಣವಾಗಿದೆ.
ಈ ವರ್ಷ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಮಂಡಳಿ ಹಂತದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಶಾಲೆಗಳಿಗೆ ಲಾಗಿನ್ ನೀಡಲು ಮುಂದಾಗಿದೆ. ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ಯಾವುದೇ ಅನುದಾನ ಶಾಲೆಗಳಿಗೆ ನೀಡಿಲ್ಲ. ಶಿಕ್ಷಕರು ಹಾಗೂ ಶಾಲೆಗಳ ಹೆಗಲಿಗೆ ಈ ಖರ್ಚು ಹಾಕಿ ಇಲಾಖೆ ಸುಮ್ಮನಾಗಿದೆ. ಈ ಹಿನ್ನೆಲೆಯಲ್ಲಿ ದಾನಿಗಳ ಮೊರೆ ಹೋಗಬೇಕಾದ ಸ್ಥಿತಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಎದುರಾಗಿದೆ.
ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಸರಕಾರ ಇದಕ್ಕೆ ಯಾವುದೇ ಅನುದಾನ ನೀಡಿಲ್ಲ. ಒಬ್ಬ ವಿದ್ಯಾರ್ಥಿಗೆ 6 ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಿದ್ಧಪಡಿಸಿ ನೀಡಲು ಕನಿಷ್ಠ 50ರಿಂದ 60 ರೂ. ಖರ್ಚಾಗುತ್ತದೆ. ಇಲಾಖೆ ಇದಕ್ಕೆ ಅನುದಾನ ನೀಡದೆ ಏಕಾಏಕಿ ಈ ರೀತಿಯ ನಿರ್ಧಾರ ಕೈಗೊಂಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇಲಾಖೆಯ ನಿರ್ಧಾರವನ್ನು ಪೋಷಕರು ಕೂಡ ವಿರೋಧಿಸಿದ್ದಾರೆ. ಶಿಕ್ಷಣದಲ್ಲಿ ಯಾವುದೇ ಬದಲಾವಣೆ ತರಬೇಕಾದರೆ ಅದನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಾಡಬೇಕು. ಅರ್ಧವಾರ್ಷಿಕ ಪರೀಕ್ಷೆಗೆ ಯಾರು ಪ್ರಶ್ನೆ ಪತ್ರಿಕೆ ತಯಾರಿಸಬೇಕು ಎಂಬ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕೈಗೊಳ್ಳಬೇಕು. ಪರೀಕ್ಷೆಗಳನ್ನು ಶಾಲಾ ಮಟ್ಟದಲ್ಲೇ ನಡೆಸಿದರು ಕೂಡ ಮಂಡಳಿಯಿಂದ ಬರುವ ಪ್ರಶ್ನೆ ಪತ್ರಿಕೆ ಈಗಾಗಲೇ ಪರೀಕ್ಷೆಗಳ ಒತ್ತಡದಲ್ಲಿರುವ ವಿದ್ಯಾರ್ಥಿಗಳ ಮೇಲೆ ಇನ್ನಷ್ಟು ಭಾರವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳ, ಶಿಕ್ಷಕರ ಹಾಗೂ ತಜ್ಞರ ಅಭಿಪ್ರಾಯಗಳನ್ನು ಪಡೆಯದೆ ಈ ರೀತಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಸರ್ಕಾರವು ಕೈಬಿಡಬೇಕು. ಕೂಡಲೇ ಮಂಡಳಿ ಪ್ರಶ್ನೆ ಪತ್ರಿಕೆಗಳನ್ನು ಕೈಬಿಟ್ಟು ಶಾಲಾ ಮಟ್ಟದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ರಚಿಸವಂತೆ ಒತ್ತಾಯಿಸಿದ್ದಾರೆ. ಇಲಾಖೆಯ ನಡೆಗೆ ಖಾಸಗಿ ಶಾಲೆಗಳ ಒಕ್ಕೂಟವೂ ತಿರುಗಿ ಬಿದ್ದಿದೆ.