ಎಮರ್ಜೆನ್ಸಿ ಚಿತ್ರದಿಂದಾಗಿ ನಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಶಂಕೆ
ಮುಂಬಯಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಬದುಕಿನ ಮೇಲೆ ಬೆಳಕು ಚೆಲ್ಲುವ ಎಮರ್ಜೆನ್ಸಿ ಚಿತ್ರ ವಿವಾದದಲ್ಲಿ ಸಿಲುಕಿರುವಾಗಲೇ ಈ ಚಿತ್ರದ ನಿರ್ದೇಶಕಿ, ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮುಂಬಯಿಯಲ್ಲಿರುವ ತನ್ನ ವೈಭವೋಪೇತ ಬಂಗಲೆಯನ್ನು ಮಾರಾಟ ಮಾಡಿರುವುದು ಹಲವು ಊಹಾಪೋಹಗಳನ್ನು ಸೃಷ್ಟಿಸಿದೆ. ಎಮರ್ಜೆನ್ಸಿಯಿಂದಾಗಿ ಕೈ ಖಾಲಿಯಾಗಿ ಕಂಗನಾ ರಣಾವತ್ ಬಂಗಲೆ ಮಾರಬೇಕಾಯಿತು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಬಂಗಲೆ ಮಾರಾಟದ ಬಗ್ಗೆ ಕಂಗನಾ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ ಮಾರಾಟ ವ್ಯವಹಾರದ ಸಕಲ ಮಾಹಿತಿಗಳು ಬಹಿರಂಗವಾಗಿವೆ. ಮುಂಬಯಿಯ ಪ್ರತಿಷ್ಠಿತ ಬಡಾವಣೆ ಬಾಂದ್ರಾದ ಪಾಲಿಹಿಲ್‌ನಲ್ಲಿದೆ ಕಂಗನಾ ಬಂಗಲೆ. ಇದನ್ನು ಅವರು 32 ಕೋಟಿ ರೂಪಾಯಿಗೆ ಮಾರಾಟ ಮಾಡಿರುವ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಪಾಲಿಹಿಲ್ ಸಿನಿಮಾದವರು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳಂಥ ಸಿರಿವಂತರು ವಾಸವಾಗಿರುವ ಬಡಾವಣೆ. ಇಲ್ಲಿ ಒಂದು ಚದರ ಅಡಿ ನೆಲಕ್ಕೆ ಲಕ್ಷಗಟ್ಟಲೆ ರೂ. ಬೆಲೆಯಿದೆ.
ಬಂಗಲೆ ಮಾರಾಟ ವ್ಯವಹಾರ ಸೆ.5ರಂದು ಫೈನಲ್ ಆಗಿದೆ. ಇದನ್ನು ಕಂಗನಾ 2017ರಲ್ಲಿ 20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದರು. ಈ ಕಟ್ಟಡ ಸುಮಾರು 3,075 ಚದರ ಅಡಿ ಇದೆ. 565 ಚದರ ಅಡಿ ಪಾರ್ಕಿಂಗ್ ಜಾಗ ಹೊಂದಿದೆ. ಶ್ವೇತಾ ಭತಿಜಾ ಎಂಬವರು ಈ ಕಟ್ಟಡವನ್ನು ಖರೀದಿ ಮಾಡಿದ್ದಾರೆ. ತಮಿಳುನಾಡು ಮೂಲದ ಶ್ವೇತಾ ಭತಿಜಾ 1.92 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕ ಪಾವತಿ ಮಾಡಿದ್ದಾರೆ.
ಕಂಗನಾ ಅವರ ಈ ಕಟ್ಟಡ ಮೊದಲಿನಿಂದಲೂ ಚರ್ಚೆಯಲ್ಲಿ ಇತ್ತು. ಬೃಹನ್ಮುಂಬಯಿ ಮಹಾನಗರಪಾಲಿಕೆ 2020ರಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಆಗಿದೆ ಎನ್ನುವ ಆರೋಪದಲ್ಲಿ ಈ ಕಟ್ಟಡದ ಒಂದು ಭಾಗವನ್ನು ಒಡೆದು ಹಾಕಿತ್ತು. ಇದರ ಹಿಂದೆ ರಾಜಕೀಯ ಪ್ರೇರಣೆ ಇದೆ ಎಂದು ಕಂಗನಾ ಆರೋಪಿಸಿದ್ದರು.
ಕಂಗನಾ ನಟನೆಯ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಗುತ್ತಿಲ್ಲ. ಇದು ಕಂಗನಾ ಬೇಸರಕ್ಕೆ ಕಾರಣ ಆಗಿದೆ. ಈ ಕಾರಣದಿಂದಲೇ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಲಾಗಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಮಂಡಳಿ ಇದನ್ನು ಅಧಿಕೃತವಾಗಿ ಹೇಳಿಲ್ಲ. ಚಿತ್ರಕ್ಕೆ ಕಂಗನಾ ದೊಡ್ಡ ಪ್ರಮಾಣದಲ್ಲಿ ದುಡ್ಡು ಹಾಕಿದ್ದಾರೆ. ಚಿತ್ರ ಬಿಡುಗಡೆಯಾಗದೆ ಅವರು ಬಹಳ ಆತಂಕದಲ್ಲಿದ್ದಾರೆ. ಎಮರ್ಜೆನ್ಸಿ ಕುರಿತಾದ ಚಿತ್ರವಾಗಿದ್ದರೂ ಇದರಲ್ಲಿ ಇಂದಿರಾ ಗಾಂಧಿ ಬದುಕಿನ ಹಲವು ಘಟನೆಗಳಿವೆ. ಸಖ್ ಸಮುದಾಯದವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸಿನವರಿಗೆ ಚಿತ್ರದ ಬಗ್ಗೆ ಆಕ್ಷೇಪಗಳಿದ್ದರೂ ಅವರೇ ಪ್ರತಿಪಾದಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹುಳುಕುಗಳೆಲ್ಲ ಬಯಲಾಗಬಹುದು ಎಂಬ ಕಾರಣಕ್ಕೆ ಮೌನವಾಗಿದ್ದಾರೆ.