ಹೈದರಾಬಾದ್: ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದ ವಿಲನ್, ಮಲಯಾಳಂನ ಖ್ಯಾತ ನಟ ವಿನಾಯಕನ್ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ವಿನಾಯಕನ್ ಅವರನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ಏರ್ಪೋರ್ಟ್ ಭದ್ರತೆ ಸಿಬ್ಬಂದಿ (ಸಿಐಎಸ್ಎಫ್) ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ಗೋವಾಕ್ಕೆ ಹೋಗುತ್ತಿದ್ದ ವಿನಾಯಕನ್, ಕನೆಕ್ಟಿಂಗ್ ಫ್ಲೈಟ್ ಹತ್ತಲೆಂದು ಹೈದರಾಬಾದ್‌ನಲ್ಲಿ ಇಳಿದಾಗ ವಿಮಾನ ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿಯೊಂದಿಗೆ ಜಗಳವಾಡಿ, ಹಲ್ಲೆ ಮಾಡಿದ್ದಾರೆ ಎಂದು ಏರ್ಪೋರ್ಟ್ ಭದ್ರತೆ ಸಿಬ್ಬಂದಿ ಆರೋಪಿಸಿದ್ದಾರೆ. ಆದರೆ ವಿನಾಯಕನ್ ಸಿಐಎಸ್ಎಫ್ ಸಿಬ್ಬಂದಿಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿದ್ದಾರೆ.
ಸಿಐಎಸ್ಎಫ್ ಸಿಬ್ಬಂದಿ ಒಂದು ಕೋಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಣ್ಣ ವಿಷಯಕ್ಕೆ ಭದ್ರತಾ ಸಿಬ್ಬಂದಿ ಥಳಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಬೇಕಿದ್ದರೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬಹುದು ಎಂದು ವಿನಾಯಕನ್ ಹೇಳಿದ್ದಾರೆ.
ವಿನಾಯಕನ್ ಮಲಯಾಳಂನ ಬಹಳ ಜನಪ್ರಿಯ ನಟ. ಕಳೆದ ವರ್ಷ ಸಹ ವಿನಾಯಕನ್ ತಮ್ಮ ಸಂಬಂಧಿಗಳ ಜೊತೆ ಜಗಳ ಮಾಡಿಕೊಂಡು ಎರ್ನಾಕುಲಂ ಪೊಲೀಸ್ ಠಾಣೆಗೆ ಹೋಗಿದ್ದ ವಿನಾಯಕನ್ ಅನ್ನು ಸಿಬ್ಬಂದಿ ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ವಿನಾಯಕನ್ ಗಲಾಟೆ ಮಾಡಿದ್ದಾರೆ ಎಂದು ವಿನಾಯಕನ್‌ರನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್‌ಬಸ್ಟರ್ ಆದ ರಜನೀಕಾಂತ್ರ ‘ಜೈಲರ್’ ಸಿನಿಮಾನಲ್ಲಿ ವಿನಾಯಕನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.