ಪುತ್ತೂರು : ಕಿಲ್ಲೇ ಮೈದಾನದಲ್ಲಿ ಪುತ್ತೂರು ಶ್ರೀ ದೇವತಾ ಸಮಿತಿ ವತಿಯಿಂದ ಏಳು ದಿನಗಳ ಕಾಲ ನಡೆಯುವ 67ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ ಶ್ರೀ ಗಣೇಶನ ಮೂರ್ತಿ ರಚನಾ ಸ್ಥಳದಿಂದ ಮೆರವಣಿಗೆ ಮೂಲಕ ಶ್ರೀ ಗಣೇಶನನ್ನು ಕರೆತಂದು ಕಿಲ್ಲೇ ಮೈದಾನದ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಮಧ್ಯಾಹ್ನ ಮಹಾಪೂಜೆ ನಡೆದು, ಸಾವಿರಾರು ಮಂದಿಗೆ ಅನ್ನಸಂತಪರ್ಣೆ ಜರಗಿತು.
ಏಳು ದಿನಗಳ ಕಾಲ ನಡೆಯುವ ಕಿಲ್ಲೇ ಮೈದಾನದ ಗಣಪತಿ ಅತ್ಯಂತ ಪುರಾತನವಾಗಿದ್ದು, ಇಲ್ಲಿ ಒಟ್ಟು ಏಳು ದಿನಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗುತ್ತದೆ. ವಿಶೇಷವಾಗಿ ಕೊನೆಯ ದಿನ ಶ್ರೀ ಗಣೇಶ ಮೂರ್ತಿಯೊಂದಿಗೆ ಬಲಿ ಉತ್ಸವ ನಡೆಯುತ್ತದೆ.
ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಗಣೇಶೋತ್ಸವಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಕಿಲ್ಲೆ ಗಣಪತಿಯ ವೆಬ್ ಸೈಟ್ ನ್ನು ತಾಪಂ ಇಒ ನವೀನ್ ಕುಮಾರ್ ಭಂಡಾರಿ ಕ್ಯೂ ಆರ್ ಕೋಡ ಮೂಲಕ ಅನಾವರಣ ಮಾಡಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಸಮಿತಿಯ ಸುದೇಶ್ ಕುಮಾರ್, ಪಿ.ವಿ.ದಿನೇಶ್ ಕುಲಾಲ್, ಮತ್ತಿತರರು ಉಪಸ್ಥಿತರಿದ್ದರು.