ಸಾಧನೆಗೆ ಯಾವ ವೈಕಲ್ಯವೂ ಅಡ್ಡಿ ಆಗಲಿಲ್ಲ – ಮರಿಯಪ್ಪನ್ ತಂಗವೇಲು

ಸತತ 3 ಪಾರಾ ಒಲಿಂಪಿಕ್ಸ್ ಕೂಟಗಳಲ್ಲಿ ಪದಕ ಗೆದ್ದ ಏಕೈಕ ಕ್ರೀಡಾಪಟು

2024ರ ಪ್ಯಾರಿಸ್ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆದಿದೆ. ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಭಾರತದ ಪದಕ ಟ್ಯಾಲಿಯು 27ಕ್ಕೆ ತಲುಪಿದೆ. ಅದರಲ್ಲಿ 6 ಚಿನ್ನ, 9 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಸೇರಿವೆ. 12 ಕ್ರೀಡಾ ವಿಭಾಗಗಳಲ್ಲಿ ಕೇವಲ 84 ಪಾರಾ ಅಥ್ಲಿಟ್‌ಗಳು ಭಾಗವಹಿಸಿ ಇಷ್ಟೊಂದು ಪದಕಗಳನ್ನು ಗೆದ್ದದ್ದು ನಿಜಕ್ಕೂ ಅದ್ಭುತ ಸಾಧನೆಯೇ ಸರಿ.

ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ



































 
 

ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳದ್ದು ಬೇರೆ ಬೇರೆ ನೋವಿನ ಕಥೆಗಳು ಇವೆ. ಅವರು ತಮ್ಮ ವೈಕಲ್ಯಗಳನ್ನು ಮೀರಿ ನಿಂತ ಯಶೋಗಾಥೆಗಳು ನಿಜಕ್ಕೂ ನಮಗೆಲ್ಲ ಸ್ಫೂರ್ತಿಯನ್ನು ಒದಗಿಸುತ್ತವೆ. ಅವರಲ್ಲಿ ಕೆಲವರ ಬಗ್ಗೆ ನಾನು ಸರಣಿಯಾಗಿ ಬರೆಯಬೇಕು.
ನನಗೆ ಹೆಚ್ಚು ಸ್ಫೂರ್ತಿ ನೀಡಿದ್ದು ಈ ಮರಿಯಪ್ಪನ್ ತಂಗವೇಲು. ತಮಿಳುನಾಡಿನ ಈ ದೈತ್ಯ ಪ್ರತಿಭೆ ಮಾಡಿದ ಸಾಧನೆ, ಅದಕ್ಕಾಗಿ ಆತನ ಅಮ್ಮ ಸರೋಜಾ ಮಾಡಿದ ತ್ಯಾಗ ಎಲ್ಲವೂ ನನಗೆ ಕ್ಲಾಸಿಕ್ ಉದಾಹರಣೆಗಳಾಗಿ ಕಂಡುಬರುತ್ತವೆ.

ಬಾಲ್ಯದ ಬವಣೆಗಳು ಆತನಿಗೆ ಸವಾಲಾಗಲೇ ಇಲ್ಲ

ತಮಿಳುನಾಡಿನ ಸೇಲಂ ಜಿಲ್ಲೆಯ ಒಂದು ಸಣ್ಣ ಊರಿನಲ್ಲಿ ಹುಟ್ಟಿದ ಆತನ ಹೆತ್ತವರಿಗೆ ಒಟ್ಟು 6 ಜನ ಮಕ್ಕಳು. ತೀವ್ರವಾದ ಬಡತನ, ಹಸಿವು ಇವುಗಳೊಂದಿಗೆ ಸೆಣಸು ಆ ಕುಟುಂಬದ್ದು. ಹೊಣೆ ಹೊತ್ತು ದುಡಿಯಬೇಕಾಗಿದ್ದ ಅಪ್ಪ ಕುಟುಂಬವನ್ನು ನಡುದಾರಿಯಲ್ಲಿ ಬಿಟ್ಟು ಹೋದದ್ದು ಮುಂದೆ ಭಾರಿ ಸಮಸ್ಯೆಗಳಿಗೆ ಕಾರಣವಾಯಿತು. ಅಮ್ಮ ಸರೋಜಾ ಒಬ್ಬಂಟಿಯಾಗಿ ಕೂಲಿ ಕೆಲಸ ಮಾಡಿ ಕುಟುಂಬದ ಭಾರ ಹೊರಬೇಕಾಯಿತು. ಇಟ್ಟಿಗೆ ಹೊರುವ ಕೆಲಸ, ತರಕಾರಿ ತಳ್ಳುಗಾಡಿಯ ವ್ಯಾಪಾರ ಮಾಡಿ ದಿನಕ್ಕೆ 100 ರೂ. ಸಂಪಾದನೆ ಮಾಡುತ್ತಿದ್ದ ಆ ಮಹಾತಾಯಿಯು ಒಂದು ದಿನವೂ ಮಕ್ಕಳ ಮುಂದೆ ಕಣ್ಣೀರು ಹಾಕಲಿಲ್ಲ. ಬೇಜಾರು ಮಾತಾಡಲಿಲ್ಲ. ತನ್ನ ಮಕ್ಕಳನ್ನು ತಾನು ಅರೆಹೊಟ್ಟೆ ಉಂಡು ಸ್ವಾಭಿಮಾನದಲ್ಲಿ ಬೆಳೆಸಿದ ಸಾಧನೆ ಆಕೆಯದ್ದು.

5ನೇ ವರ್ಷ ಪ್ರಾಯದಲ್ಲಿ ಮಗುವಿಗೆ ಬಸ್ ಅಪಘಾತ, ಶಾಶ್ವತ ವೈಕಲ್ಯ

ಅಮ್ಮನ ಪ್ರೀತಿಯ ಮಗ ಮರಿಯಪ್ಪನ್ 5ನೇ ವರ್ಷದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಒಂದು ಸರಕಾರಿ ಬಸ್ಸು ಬಂದು ಗುದ್ದಿ ಭೀಕರ ಅಪಘಾತ ನಡೆದುಹೋಯಿತು. ಬಸ್ಸಿನ ಡ್ರೈವರ್ ಕುಡಿದಿದ್ದ ಮತ್ತು ಹುಡುಗನ ಬಲಗಾಲಿನ ಮೊಣಗಂಟಿನ ಕೆಳಭಾಗ ಪೂರ್ತಿ ಹುಡಿಯಾಯಿತು. ವೈದ್ಯರು
‘ಶಾಶ್ವತ ಅಂಗವೈಕಲ್ಯ’ ಎಂದು ಷರಾ ಬರೆದು ಫೈಲ್ ಮುಚ್ಚಿಬಿಟ್ಟರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಮರಿಯಪ್ಪನಿಗೆ ಆ ಅಪಘಾತವು ಭಾರಿ ದೊಡ್ಡ ಸವಾಲುಗಳನ್ನು ಉಳಿಸಿಹೋಯಿತು. ಅಮ್ಮ ಸರೋಜಾ ತಮಿಳುನಾಡು ಬಸ್ ನಿಗಮದ ಮೇಲೆ ಕೇಸ್ ಜಡಿದು 17 ವರ್ಷಗಳ ಕಾಲ ಕಾನೂನಾತ್ಮಕ ಫೈಟ್ ಮಾಡಿದರು. ಅದಕ್ಕೆಲ್ಲ ದುಡ್ಡು ಎಲ್ಲಿಂದ ತರುತ್ತಿದ್ದರು ಎಂದು ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ.
ಕೊನೆಗೂ ನಿಗಮವು ಕ್ಷಮೆ ಕೇಳಿ 2 ಲಕ್ಷ ಪರಿಹಾರ ನೀಡಿತು. ಅದು ಅಮ್ಮನ ಮೊದಲ ಗೆಲುವು ಆಗಿತ್ತು!

ಊನವಾಗಿದ್ದ ಬಲಗಾಲು ಸಾಧನೆಗೆ ಅಡ್ಡಿ ಆಗಲಿಲ್ಲ

ಅದುವರೆಗೆ ವಾಲಿಬಾಲನಲ್ಲಿ ಆಸಕ್ತಿ ಹೊಂದಿದ್ದ ಮರಿಯಪ್ಪನಿಗೆ ಶಾಲೆಯ ಕ್ರೀಡಾ ಶಿಕ್ಷಕರು ಹೈಜಂಪ್ ಮೇಲೆ ಗಮನ ಕೊಡಲು ಹೇಳಿದ್ದರು. ಅದು ಉತ್ತಮ ಫಲಿತಾಂಶ ನೀಡಿತು. ಈ ಭಿನ್ನ ಸಾಮರ್ಥ್ಯದ ಹುಡುಗ ಅವನದ್ದೇ ತರಗತಿಯ ಬಲಿಷ್ಠ ಹುಡುಗರ ಜೊತೆಗೆ ಹೈಜಂಪನಲ್ಲಿ ಸ್ಪರ್ಧಿಸಿ ಬಹುಮಾನ ಗೆಲ್ಲಲು ಆರಂಭ ಮಾಡಿದಾಗ ಆತನ ಆತ್ಮವಿಶ್ವಾಸವು ಕುದುರಿತು. ಅಮ್ಮ ಎಲ್ಲೆಲ್ಲೋ ದುಡಿದು ತಂದು ಮಗನ ಕನಸಿಗೆ ಶಕ್ತಿ ತುಂಬಿದರು. ಆತನಿಗಾಗಿ ಹಸಿವೆಯನ್ನೇ ಮರೆತರು.

ಸತ್ಯನಾರಾಯಣ ಎಂಬ ದೇವರಂತಹ ಕೋಚ್

ಈತನ ದೈತ್ಯ ಪ್ರತಿಭೆಯನ್ನು ಗುರುತಿಸಿದ ಕೋಚ್ ಸತ್ಯನಾರಾಯಣ ಅವರು ಮರಿಯಪ್ಪನ್ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿದರು. ಸೇಲಂನಿಂದ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕ್ರೀಡಾ ಅಕಾಡೆಮಿಯಲ್ಲಿ ಎರಡು ವರ್ಷಗಳ ಕೋಚಿಂಗ್ ವ್ಯವಸ್ಥೆ ಮಾಡಿದರು. ತಿಂಗಳ 10,000 ರೂಪಾಯಿಗಳ ಸ್ಟೈಪೆಂಡ್ ವ್ಯವಸ್ಥೆ ಕೂಡ ಅವರು ಮಾಡಿಕೊಟ್ಟರು. ಬೆಂಗಳೂರಿನಲ್ಲಿ ಮರಿಯಪ್ಪನ್ ಪ್ರತಿಭೆಯು ಪುಟವಿಟ್ಟ ಚಿನ್ನದಂತೆ ಎದ್ದುಬಂದಿತು. ಆ ಸತ್ಯನಾರಾಯಣ ಅವರು ಇಂದಿಗೂ ಮರಿಯಪ್ಪನ್ ಕೋಚ್ ಆಗಿದ್ದಾರೆ.

ಮರಿಯಪ್ಪನ್ ತಂಗವೇಲು – ಸಾಲು ಸಾಲು ಸಾಧನೆಗಳು

ಮರಿಯಪ್ಪನ್ ತಂಗವೇಲು 2016ರ ರಿಯೋ ಪಾರಾ ಒಲಿಂಪಿಕ್ ಕೂಟದಲ್ಲಿ ಮೊದಲ ಬಾರಿ ಭಾಗವಹಿಸಿದರು. ಅಲ್ಲಿ 1.89 ಮೀ. ಎತ್ತರಕ್ಕೆ ಹಾರಿ ಚಿನ್ನದ ಪದಕವನ್ನು ಗೆದ್ದರು. ಆಗ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಆತನನ್ನು ಸನ್ಮಾನ ಮಾಡಿ 2 ಕೋಟಿ ರೂ.ಗಳ ನಗದು ಬಹುಮಾನವನ್ನು ನೀಡಿದರು.

ಮುಂದೆ 2020ರ ಟೋಕಿಯೋ ಪಾರಾ ಒಲಿಂಪಿಕ್ಸ್‌ನಲ್ಲಿ ಆತ ಮತ್ತೆ ಬೆಳ್ಳಿಯ ಪದಕ ಗೆದ್ದರು. ಈ ಬಾರಿಯ ಪ್ಯಾರಿಸ್ ಪಾರಾ ಒಲಿಂಪಿಕ್ ಕೂಟದಲ್ಲಿ ಆತ ಮತ್ತೆ ಕಂಚಿನ ಪದಕ ಗೆದ್ದಿದ್ದಾರೆ. ಹೀಗೆ ಸತತ ಮೂರು ಒಲಿಂಪಿಕ್ಸ್ ಕೂಟಗಳಲ್ಲಿ ಪದಕ ಗೆದ್ದ ಏಕೈಕ ಕ್ರೀಡಾಪಟು ಎಂಬ ಕೀರ್ತಿಗೆ ಆತ ಪಾತ್ರರಾಗಿದ್ದಾರೆ.
ಅದೇ ರೀತಿ ಪಾರಾ ವಿಶ್ವಕೂಟದಲ್ಲಿ ಒಂದು ಚಿನ್ನದ ಪದಕ, ಒಂದು ಕಂಚಿನ ಪದಕ ಗೆದ್ದಿದ್ದಾರೆ. ಈ ಡಬ್ಬಲ್ ಸಾಧನೆ ಕೂಡ ಏಕಮೇವ ಸಾಧನೆ.
ಏಷಿಯನ್ ಪಾರಾ ಕೂಟದಲ್ಲಿ ಮರಿಯಪ್ಪನ್ ಈಗಾಗಲೇ ಬೆಳ್ಳಿಯ ಪದಕ ಗೆದ್ದಿದ್ದಾರೆ.

ಪದ್ಮಶ್ರೀ, ಅರ್ಜುನ ಮತ್ತು ಖೇಲ್‌ರತ್ನ ಪ್ರಶಸ್ತಿಗಳು

2017ರಲ್ಲಿ ಪದ್ಮಶ್ರೀ ಪ್ರಶಸ್ತಿ, ಅದೇ ವರ್ಷ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನಚಂದ್ ಖೇಲ್‌ರತ್ನ ಪ್ರಶಸ್ತಿಗಳನ್ನು ಮರಿಯಪ್ಪನ್ ತಂಗವೇಲು ಈಗಾಗಲೇ ಪಡೆದಾಗಿದೆ. ಇವೆಲ್ಲವೂ ಅವರಿಗೆ ಅತ್ಯಂತ ಅರ್ಹವಾಗಿಯೇ ದೊರೆತಿವೆ.
ಮುಂದೆ ನಡೆಯಲಿರುವ 2028ರ ಲಾಸ್ ಏಂಜಲೀಸ್ ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಕೂಡ ಭಾಗವಹಿಸುತ್ತೇನೆ, ಅಲ್ಲಿ ಚಿನ್ನದ ಪದಕವನ್ನು ಗೆದ್ದು ಬರುತ್ತೇನೆ ಎಂದು ತಂಗವೇಲು ಭರವಸೆಯಿಂದ ಹೇಳಿದ್ದಾರೆ.

ಅಮ್ಮ ನನ್ನ ದೇವತೆ ಅಂದರು ಮರಿಯಪ್ಪನ್

‘ನನ್ನ ಎಲ್ಲ ಸಾಧನೆಗಳಿಗೆ ಅಮ್ಮ ಸರೋಜಾ ಅವರ ತ್ಯಾಗವೇ ಕಾರಣ. ಅವರು ನಮ್ಮ ಕುಟುಂಬದ ನೆರವಿಗೆ ನಿಲ್ಲದಿದ್ದರೆ ನಾವೆಲ್ಲರೂ ಭಿಕ್ಷೆ ಬೇಡಬೇಕಾಗಿತ್ತು. ಆಕೆಯ ಜಿದ್ದು, ಹೋರಾಟದ ಮನೋಭಾವ ನನಗೆ ರಕ್ತದ ಮೂಲಕ ಬಂದಿದೆ ಅನ್ನಿಸುತ್ತಿದೆ. ಅವರೇ ನನ್ನ ದೇವತೆ ‘ ಎಂದಿರುವ ತಂಗವೇಲು ಅಮ್ಮನಿಗಾಗಿ ನಗರದಲ್ಲಿ ಚಂದವಾದ ಮನೆಯನ್ನು ಕಟ್ಟಿಕೊಟ್ಟಿದ್ದಾರೆ. ತುಂಬಾ ಬೆಲೆಬಾಳುವ ಒಂದು ತೋಟವನ್ನು ಕೂಡ ಖರೀದಿ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ಅಮ್ಮನಿಗಾಗಿ ನಾನು ಏನು ಮಾಡಿದರೂ ಕಡಿಮೆಯೇ ಎಂದವರು ಹೇಳಿದ್ದಾರೆ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top