ಶಿಕ್ಷಣದೊಂದಿಗೆ ಜೀವನ ರೂಪಿಸಿಕೊಳ್ಳುತ್ತಿರುವ ದೀಕ್ಷಿತ್

’ವಿದ್ಯೆ ನೀಡದ ತಂದೆ, ಬುದ್ಧಿ ಹೇಳದ ಗುರುವು, ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು ಸರ್ವಜ್ಞ’ ಎಂದು ಹೇಳಿ ವೈಯಕ್ತಿಕ ಜವಾಬ್ದಾರಿಗಳಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟ ಸರ್ವಜ್ಞನ ವಚನಗಳನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ವಚನದ ಈ ಸಾಲಿನ ಮೊದಲನೆ ವಿಂಗಡನೆಯು ತಂದೆಯ ಜವಾಬ್ದಾರಿಯನ್ನು ಹೇಳುತ್ತದೆ. ಆದರೆ ತಂದೆಯಿಂದ ವಿದ್ಯೆಗೆ ಸಹಾಯ, ಪ್ರೋತ್ಸಾಹ ಪಡೆಯುವ ಅವಕಾಶದಿಂದ ವಂಚಿತನಾದರೂ ಧೃತಿಗೆಡದೆ ಹೆತ್ತಮ್ಮನ ಆಶೀರ್ವಾದದ ಬಲದೊಂದಿಗೆ ತನ್ನ ವಿದ್ಯಾಭ್ಯಾಸಕ್ಕೆ ತಾನೇ ಹಾದಿ ಮಾಡಿಕೊಂಡು ಮಹತ್ತರವಾದುದನ್ನು ಸಾಧಿಸಬೇಕೆಂಬ ಛಲದಲ್ಲಿ ಪದವಿ ವ್ಯಾಸಂಗದೊಂದಿಗೆ ಆಂಶಕಾಲಿಕ ಉದ್ಯೋಗವನ್ನೂ ಮಾಡುತ್ತಾ ಮುನ್ನಡೆಯುತ್ತಿರುವ ಹದಿ ಹರೆಯದ ಹುಡುಗನೊಬ್ಬನ ಯಶೋಗಾಥೆ ಇಲ್ಲಿದೆ.

ಕೊಡಗಿನ ಸೋಮವಾರಪೇಟೆಯ ಬಿಳಿಗೇರಿ ಗ್ರಾಮದ ಮಕ್ಕಳ ಗುಡಿ ಬೆಟ್ಟದ ಬಳಿಯ ನಿವಾಸಿಗಳಾದ ಗೋವಿಂದ ಗೌಡ ಮತ್ತು ಜಯಲಕ್ಷ್ಮಿ ದಂಪತಿಗಳ ಪುತ್ರ ದೀಕ್ಷಿತ್ ಜಿ. ಈ ಸಾಧಕ. ತನ್ನ ಹುಟ್ಟೂರಿನ ಆಸುಪಾಸಿನ ಸರಕಾರಿ ಶಾಲೆಗಳಲ್ಲಿ ೧ರಿಂದ ೧೦ನೆ ತರಗತಿಯ ಶಿಕ್ಷಣ ಪಡೆದ ಬಳಿಕ ಮಾದಾಪುರದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದುಕೊಂಡ. ಇದೀಗ ಈತ ಕಡಬ ತಾಲೂಕಿನ ಸವಣೂರಿನಲ್ಲಿರುವ ಸವಣೂರು ಸೀತಾರಾಮ ರೈಯವರ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾನೆ. ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಇಲಾಖೆಯು ಪುತ್ತೂರಿನ ಬಿರುಮಲೆ ಬೆಟ್ಟದ ತುದಿಯಲ್ಲಿ ನಡೆಸುತ್ತಿರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ತಂಗಿ ತನ್ನ ಸಾಧನಾಮಯ ವ್ಯಾಸಂಗವನ್ನು ನಡೆಸುತ್ತಿದ್ದಾನೆ. ತನ್ನ ವ್ಯಾಸಂಗಕ್ಕೆ ಬೇಕಾಗುವ ಶುಲ್ಕ ಇತ್ಯಾದಿ ಖರ್ಚುಗಳನ್ನು ತಾನೇ ಸಂಪಾದಿಸಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾನೆ.

ದೀಕ್ಷಿತ್‌ನ ದಿನಚರಿ







































 
 

ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಅನಘ ಟ್ರಾನ್ಸ್‌ಪೋರ್ಟ್‌ನವರಿಗೆ ತಮ್ಮ ಸರಕು ವಾಹನಗಳಲ್ಲಿ ಬರುವ ಸರಕುಗಳನ್ನು ಬೆಳ್ಳಂಬೆಳಗ್ಗೆ ನಿಗದಿತ ಸ್ಥಳಗಳಿಗೆ ವಿತರಿಸಲು ಕ್ರಿಯಾಶೀಲ ಹುಡುಗರ ಸೇವೆಯ ಅವಶ್ಯಕತೆ ಸದಾ ಇರುತ್ತದೆ. ಅವರ ಅವಶ್ಯಕತೆಯನ್ನು ತನ್ನ ಪಾಲಿನ ಅವಕಾಶವನ್ನಾಗಿ ಪರಿವರ್ತಿಸಿ ಜಾಣ್ಮೆಯಿಂದ ತನ್ನ ಬದುಕಿನ ಹಾದಿಯನ್ನಾಗಿಸಿಕೊಂಡದ್ದು ದೀಕ್ಷಿತ್‌ನ ಹೆಚ್ಚುಗಾರಿಕೆ. ಸರಕುಗಳ ವಿತರಣೆಗಾಗಿ ಕರೆ ಬಂದಾಗಲೆಲ್ಲ ಬೆಳಿಗ್ಗಿನ ಮಂಜು ಮುಸುಕಿದ ಚಳಿಯ ವಾತಾವರಣದಲ್ಲಿ ೫ ಗಂಟೆಗೆಲ್ಲ ಬಿರುಮಲೆ ಬೆಟ್ಟ ಇಳಿದು ಪುತ್ತೂರು ನಗರ ಸೇರುವ ಇವನು ಪೂರ್ವಾಹ್ನ ಗಂಟೆ ೯ರ ತನಕವೂ ತನ್ನ ನಗುಮುಖದ ಸೇವೆ ನೀಡುತಾನೆ. ಪ್ರತಿಯಾಗಿ ದಿನವೊಂದ್ಕಕೆ ರೂ. ೩೫೦/-ನ್ನು ಸಂಭಾವನೆಯಾಗಿ ಪಡೆಯುತ್ತಾನೆ. ಬಳಿಕ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ಪದವಿ ವ್ಯಾಸಂಗಕ್ಕಾಗಿ ಸರಕಾರಿ ಬಸ್ಸನ್ನೇರಿ ಸವಣೂರಿನ ವಿದ್ಯಾಗಂಗೋತ್ರಿಯ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಯಾಣಿಸುತ್ತಾನೆ. ಕಲಿಕೆಯಲ್ಲೂ ಮುಂದಿರುವ ಈತ ತನ್ನೂರಿನ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಕರೆದು ತಂದು ತಾನು ಓದುತ್ತಿರುವ ಕಾಲೇಜಿಗೆ ದಾಖಲು ಮಾಡಿಸಿದ್ದಾನೆ.

ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗಳಿಗೆ ಯಾವತ್ತೂ ಬೆಲೆಯಿದೆ

ಪುತ್ತೂರಿನ ಮಣಿಲಾ ಗ್ಸೆರೋಕ್ಸ್‌ನ ಸಿ.ಎಚ್. ಸುಬ್ಬಣ್ಣ ಶಾಸ್ತ್ರಿಯವರು ವಾಡಿಕೆಯಂತೆ ತಮ್ಮ ಮನೆಯಿಂದ ಅಂಗಡಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ದಾರಿಮಧ್ಯೆ ಅನಘ ಟ್ರಾನ್ಸ್‌ಪೋರ್ಟ್‌ನವರ ಟ್ರಕ್‌ನಿಂದ ಸರಕುಗಳನ್ನು ಇಳಿಸುತ್ತಿದ್ದ ದೀಕ್ಷಿತ್‌ನನ್ನು ಗಮನಿಸಿ ಪ್ರಭಾವಿತರಾದರು. ಅವನನ್ನು ಪ್ರಶ್ನಿಸಲಾಗಿ ಆತ ವಿದ್ಯಾರಶ್ಮಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಲೇ ತನ್ನ ಗಳಿಕೆಯ ದುಡಿಮೆಯನ್ನೂ ಮಾಡುತ್ತಿರುವುದನ್ನು ಕಂಡು ಖುಷಿಪಟ್ಟರು. ಅವನಿಗೆ ಏನಾದರೊಂದು ರೂಪದಲ್ಲಿ ಸಹಾಯ ಮಾಡಬೇಕೆಂದು ಸಂಕಲ್ಪಿಸಿದರು. ಈತ ಪರಿಶ್ರಮಯುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗಮನಿಸಿದ ಸುಬ್ಬಣ್ಣನವರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರುಗಳಾದ ಶ್ರೀಧರ್ ರೈ ಅವರಲ್ಲಿ ಈತನ ಬಗ್ಗೆ ಹೇಳಿಕೊಂಡು ಆತನಿಗೆ ವಿಶೇಷ ಪ್ರೋತ್ಸಾಹ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಶ್ರೀ ಶ್ರೀಧರ್‌ರು ಅವರ ಆತ್ಮೀಯರಾದ ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ ಕೇವಳರನ್ನು ಸಂಪರ್ಕಿಸಲಾಗಿ ದೀಕ್ಷಿತ್‌ನ ವಿವರಗಳು ಸುಬ್ಬಣ್ಣನವರನ್ನು ತಲುಪಿದವು. ತಕ್ಷಣ ಅವರು ರೂ. ೧,೦೦೦/-ವನ್ನು ಸೀತಾರಾಮ ಕೇವಳರಿಗೆ ಫೊನ್‌ಪೆ ಮೂಲಕ ಕಳುಹಿಸಿ ’ಸರ್, ಇಂತಹ ಪ್ರಾಮಾಣಿಕ ಪರಿಶ್ರಮಿಗಳೇ ನಮ್ಮ ದೇಶವನ್ನು ಸಶಕ್ತವನ್ನಾಗಿಸುವವರು. ಇದು ಅವನಿಗೆ ನನ್ನ ಸಣ್ಣದೊಂದು ಕಾಣಿಕೆ. ದಯವಿಟ್ಟು ಪ್ರಚಾರ ಬೇಡ’ ಎಂದು ಮಾಹಿತಿ ಮತ್ತು ಮನವಿಗಳನ್ನು ಸಲ್ಲಿಸಿದರು. ಆದರೆ ನಮ್ಮ ಪತ್ರಿಕಾ ಧರ್ಮಕ್ಕನುಸಾರವಾಗಿ ನಾವು ವಸ್ತುನಿಷ್ಠ ಮತ್ತು ಧನಾತ್ಮಕ ಸುದ್ದಿಗಳನ್ನು ಬಿತ್ತರಿಸಲೇ ಬೇಕೆಂಬ ಇರಾದೆಯೊಂದಿಗೆ ಸುಬ್ಬಣ್ಣನವರ ಕ್ಷಮೆಯನ್ನು ಕೋರುತ್ತಾ ಇದನ್ನು ಇಲ್ಲಿ ಪ್ರಕಟಿಸಿದ್ದೇವೆ.

ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರ ಪ್ರೋತ್ಸಾಹ ಸ್ಮರಣೆ

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಹಕಾರ ರತ್ನ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿಯವರಾದ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿಯವರ ಪ್ರೋತ್ಸಾಹವನ್ನು ಈತ ಸದಾ ನೆನೆಯುತ್ತಾನೆ. ಜೊತೆಗೆ ಅತ್ಯಂತ ಪ್ರೀತಿ ತೋರುವ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ., ಉಪ ಪ್ರಾಂಶುಪಾಲ ಶ್ರೀ ಶೇಷಗಿರಿ ಎಂ.ಎಸ್. ಮತ್ತು ಉಪನ್ಯಾಸಕ ವೃಂದದವರಾದ ಶ್ರೀಮತಿ ಪ್ರತಿಭಾ ಎಸ್., ವೆಂಕಟ್ರಮಣ, ಶ್ರೀಮತಿ ಸುಮಾ ಎಸ್., ಕಿರಣ್‌ಚಂದ್ರ ರೈ, ಸುಬ್ರಹ್ಮಣ್ಯ ಭಟ್, ತೇಜಸ್ವಿ ರೈ ಇವರನ್ನು ಅತೀವ ಗೌರವದಿಂದ ಸ್ಮರಿಸಿಕೊಳ್ಳುತ್ತಾನೆ.

ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳರು ಮಾತನಾಡಿಸಿ ಪ್ರೋತ್ಸಾಹಿಸಿದ್ದನ್ನು ಈತ ವಿಶೇಷವಾಗಿ ನೆನಪಿಸಿಕೊಳ್ಳುತ್ತಾನೆ. ಅವನ ಕಾಲೇಜಿನಲ್ಲಿ ಮುಂಬರುವ ಕಾರ್ಯಕ್ರಮವೊಂದರಲ್ಲಿ ಶ್ರೀಯುತ ಸುಬ್ಬಣ್ಣನವರು ನೀಡಿದ ಉದಾರ ಧನ ಸಹಾಯ ಅವನ ಕೈ ಸೇರಲಿದೆ. ದೀಕ್ಷಿತ್‌ಗೆ ಉಜ್ವಲ ಭವಿಷ್ಯ ಒದಗಿ ಬರಲಿ. ಅವನಂತಹ ಅನೇಕ ಯುವಶಕ್ತಿಗಳು ನಮ್ಮ ಸುತ್ತ ಮುತ್ತಲೂ ಇದ್ದಾರೆ. ಅಂತಹವರ ವಿವರಗಳನ್ನು ’ನ್ಯೂಸ್ ಪುತ್ತೂರು’ನ ಗಮನಕ್ಕೆ ತಂದಲ್ಲಿ ಅದನ್ನು ಪ್ರಕಟಿಸಲು ನಾವು ಅತೀವ ಹೆಮ್ಮೆ ಪಡುತ್ತೇವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top