ಮಕ್ಕಳ ಸುರಕ್ಷತೆಗೆ ನಿಯಮ ಕಡ್ಡಾಯಗೊಳಿಸಲು ಚಿಂತನೆ
ಬೆಂಗಳೂರು: ಮಕ್ಕಳನ್ನು ಸ್ಕೂಟಿ ಅಥವಾ ಬೈಕಿನಲ್ಲಿ ಕರೆದೊಯ್ಯುವಾಗ ಸೇಫ್ಟಿ ಹಾರ್ನೆಸ್ಟ್ ಬೆಲ್ಟ್ ಧರಿಸುವ ನಿಯಮ ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಒಂಬತ್ತು ತಿಂಗಳ ಮಗುವಿನಿಂದ ತೊಡಗಿ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಶಿಶು ಸುರಕ್ಷಾ ಕವಚ ಅಥವಾ ಸುರಕ್ಷತಾ ಬೆಲ್ಟ್ (ಸೇಫ್ಟಿ ಹಾರ್ನೆಸ್ ಬೆಲ್ಟ್) ಧರಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ನಿಯಮವನ್ನು ಕಡ್ಡಾಯಗೊಳಿಸಿದ್ದರೂ ಕರ್ನಾಟಕದಲ್ಲಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಈ ಕುರಿತು ಈಗಾಗಲೇ ಜಾಗೃತಿ ಅಭಿಯಾನ ಆರಂಭವಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಸೇಫ್ಟಿ ಹಾರ್ನೆಸ್ ಬೆಲ್ಟ್ ಇಲ್ಲದಿದ್ದರೆ ಮಕ್ಕಳು ರಸ್ತೆಗೆ ಬೀಳುವ ಅಪಾಯ ಇರುತ್ತದೆ. ಅನೇಕ ಸವಾರರು ಮಕ್ಕಳನ್ನು ಬೈಕ್‌ಗಳ ಪೆಟ್ರೋಲ್ ಟ್ಯಾಂಕ್‌ಗಳ ಮೇಲೆ ಕೂರಿಸುತ್ತಾರೆ ಅಥವಾ ಫೂಟ್‌ರೆಸ್ಟ್ ಪ್ರದೇಶದಲ್ಲಿ ನಿಲ್ಲಲು ಅವಕಾಶ ನೀಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಕ್ಕಳು ಸಮತೋಲನ ಕಳೆದುಕೊಂಡು ಬೀಳುವ ಸಾಧ್ಯತೆಯಿರುತ್ತದೆ. ಹಠಾತ್ ಬ್ರೇಕ್ ಹಾಕಿದಾಗ ಇಂಥ ಘಟನೆಗಳಾಗುವ ಸಾಧ್ಯತೆ ಹೆಚ್ಚಿದೆ. ಕೆಲವು ಮಕ್ಕಳು ಸವಾರಿ ಮಾಡುವಾಗ ನಿದ್ರಿಸಬಹುದು. ಅನೇಕ ಸವಾರರು ಒಂದು ಕೈಯಲ್ಲಿ ಮಗುವನ್ನು ಆಧರಿಸಿಕೊಂಡು ಮತ್ತೊಂದು ಕೈಯಿಂದ ವಾಹನವನ್ನು ಚಲಾಯಿಸುತ್ತಾರೆ. ಇದು ಮಗುವಿನ ಸುರಕ್ಷತೆಗೆ ಮತ್ತಷ್ಟು ಅಪಾಯಕರ. ಇಂತಹ ಸಂದರ್ಭಗಳಲ್ಲಿ ಸುರಕ್ಷತಾ ಕವಚ ಧರಿಸಿದ್ದರೆ ಮಕ್ಕಳಿಗೆ ರಕ್ಷಣೆ ದೊರೆಯುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಾದ್ಯಂತ ಸಾರಿಗೆ ಇಲಾಖೆ ಅಧಿಕಾರಿಗಳು ಈಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಕೆಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಗಳಿಗೂ ಜಾಗೃತಿ ಅಭಿಯಾನಗಳನ್ನು ವಿಸ್ತರಿಸುವ ಯೋಜನೆಗಳು ನಡೆಯುತ್ತಿವೆ. ಈ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 138 (7) ಅನ್ವಯ 9 ತಿಂಗಳು ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಎಲ್ಲ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಹಾಕಲೇಬೇಕು ಎಂದಿದೆ.