ಕಿಮ್ ಜೊಂಗ್ ಉನ್ ಆಡಳಿತದಲ್ಲಿ ಕರ್ತವ್ಯಲೋಪ ಮಾಡಿದರೆ ಅಧಿಕಾರಿಗಳಿಗೆ ಉಳಿಗಾಲವಿಲ್ಲ
ಕೊರಿಯಾ: ಕಳೆದ ಜುಲೈನಲ್ಲಿ ಉತ್ತರ ಕೊರಿಯಾದಲ್ಲಿ ಉಂಟಾಗಿದ್ದ ಭೀಕರ ಪ್ರವಾಹವನ್ನು ತಡೆಯಲು ವಿಫಲರಾದ ಆರೋಪ ಹೊರಿಸಿ 30 ಸರಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಅಲ್ಲಿನ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಆದೇಶಿಸಿದ್ದಾರೆ.
ಜುಲೈನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 4000ಕ್ಕೂ ಅಧಿಕ ಜನ ಸಾವಿಗೀಡಾಗಿದ್ದರು. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಕಾರಣ ಎಂದು ಹೇಳಿರುವ ಕಿಮ್ ಜೊಂಗ್ ಉನ್ 30 ಅಧಿಕಾರಿಗಳನ್ನು ಹೊಣೆ ಮಾಡಿ ಅವರನ್ನು ಸಾಯಿಸಲು ಆದೇಶಿಸಿದ್ದಾರೆ ಎಂದು ಉತ್ತರ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ.
ಚೀನಾದ ಗಡಿಗೆ ಸಮೀಪವಿರುವ ಚಗಾಂಗ್ ಪ್ರಾಂತ್ಯದಲ್ಲಿ ವಿನಾಶಕಾರಿ ಪ್ರವಾಹದ ನಂತರ ಸರಕಾರಿ ಅಧಿಕಾರಿಗಳು ಪ್ರಾಣಭೀತಿಯಿಂದ ನಡುಗುತ್ತಿದ್ದಾರೆ. ಸಿನುಯಿಜುನಲ್ಲಿ ನಡೆದ ತುರ್ತು ಪಾಲಿಟ್‌ಬ್ಯೂರೊ ಸಭೆಯಲ್ಲಿ ವಿಪತ್ತು ನಿರ್ವಹಣೆ ಜವಾಬ್ದಾರಿ ನಿರ್ಲಕ್ಷಿಸಿದವರನ್ನು ಕಟ್ಟುನಿಟ್ಟಾಗಿ ಶಿಕ್ಷಿಸುವಂತೆ ಕಿಮ್ ಜಾಂಗ್ ಉನ್ ಆದೇಶಿಸಿದ್ದಾರೆ.
ಜುಲೈನಲ್ಲಿ ಉತ್ತರ ಕೊರಿಯಾದ ವಾಯುವ್ಯ ಪ್ರಾಂತ್ಯದಲ್ಲಿ ತೀವ್ರವಾದ ಪ್ರವಾಹ ಮತ್ತು ಭೂಕುಸಿತವಾಗಿ ಸಾವಿರಾರು ನಿವಾಸಿಗಳು ನಿರಾಶ್ರಿತರಾಗಿದ್ದು, ಸಾವಿರಾರು ಮೃತಪಟ್ಟಿದ್ದರು. ದಕ್ಷಿಣ ಕೊರಿಯಾದ ಮಾಧ್ಯಮಗಳ ಪ್ರಕಾರ, ಪ್ರವಾಹದಿಂದ ಸತ್ತವರ ಸಂಖ್ಯೆ 4,000 ದಾಟಿದೆ. ಚಾಂಗಾಂಗ್ ಪ್ರಾಂತ್ಯ ಭಾರಿ ಮಳೆ ಮತ್ತು ಭೂಕುಸಿತದಿಂದ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.