ಲಖನೌ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಬರೋಬ್ಬರಿ 2.44 ಲಕ್ಷ ಸರ್ಕಾರಿ ನೌಕರರ ವೇತನವನ್ನು ತಡೆಹಿಡಿದಿದೆ. ಎಲ್ಲ ಸರಕಾರಿ ಉದ್ಯೋಗಿಗಳು ತಮ್ಮ ಆಸ್ತಿ ವಿವರಗಳನ್ನು ಆಗಸ್ಟ್ 31ರೊಳಗೆ ನೀಡುವಂತೆ ಸರಕಾರ ಇತ್ತೀಚೆಗೆ ಆದೇಶಿಸಿತ್ತು. ಆದರೆ ಇದುವರೆಗೂ ಸರಕಾರಿ ನೌಕರರು ಆಸ್ತಿ ವಿವರ ನೀಡದ ಕಾರಣ ಸಂಬಳ ತಡೆಹಿಡಿದು ಬಿಸಿ ಮುಟ್ಟಿಸಿದೆ.
ಸರಕಾರದ ಮುಖ್ಯ ಕಾರ್ಯದರ್ಶಿ ಎಲ್ಲ ಸರಕಾರಿ ನೌಕರರು ಆಗಸ್ಟ್ 31ರೊಳಗೆ ಚರ ಮತ್ತು ಸ್ಥಿರ ಆಸ್ತಿಗಳ ವಿವರ ನೀಡುವಂತೆ ಸೂಚಿಸಿದ್ದರು. ಮಾನವ ಸಂಪದ ಪೋರ್ಟಲ್‌ನಲ್ಲಿ ಉದ್ಯೋಗಿಗಳು ಈ ವಿವರಗಳನ್ನು ನೀಡಬೇಕಾಗಿತ್ತು. ಶೇ.17 ರಷ್ಟು ಉದ್ಯೋಗಿಗಳು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ನೀಡಿದ್ದಾರೆ. ಆಸ್ತಿ ವಿವರ ನೀಡದವರಲ್ಲಿ ಹೆಚ್ಚಿನವರು ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ನೌಕರರು. ಕಂದಾಯ ಇಲಾಖೆಯ ಬಹುತೇಕ ನೌಕರರು ಆಸ್ತಿ ವಿವರ ನೀಡಿಲ್ಲ. ಈಗ ವಿವರ ನೀಡದವರ ವೇತನ ನಿಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.
ಡಿಜಿಪಿ ಕೇಂದ್ರ ಕಚೇರಿ ತಮ್ಮ ಸಿಬ್ಬಂದಿಗೆ ಆಸ್ತಿ ವಿವರ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ನೇಮಕಾತಿ ಇಲಾಖೆಗೆ ಪತ್ರ ಕಳುಹಿಸಿದೆ. ಹಬ್ಬಹರಿದಿನಗಳು ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಯಿಂದಾಗಿ ಹಲವು ಪೊಲೀಸ್ ಸಿಬ್ಬಂದಿ ತಮ್ಮ ಆಸ್ತಿ ವಿವರಗಳನ್ನು ಸಕಾಲಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ದಿನಾಂಕವನ್ನು ಗೃಹ ಇಲಾಖೆಗೆ ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ.
ಆಗಸ್ಟ್ ತಿಂಗಳ ವೇತನವನ್ನು ತಡೆಹಿಡಿಯಲಾದ ಅಧಿಕಾರಿಗಳು ಮತ್ತು ನೌಕರರು ಆಸ್ತಿ ವಿವರಗಳನ್ನು ನೀಡಿದ ನಂತರವೇ ಅವರ ವೇತನವನ್ನು ಬಿಡುಗಡೆ ಮಾಡಲಾಗುತ್ತದೆ. ಅವರ ಆಸ್ತಿ ವಿವರಗಳನ್ನು ಪಡೆದ ನಂತರ, ಸರ್ಕಾರದೊಂದಿಗೆ ಮಾತುಕತೆ ನಡೆಸಿದ ನಂತರ ಅವರ ವೇತನವನ್ನು ಪಾವತಿಸುವ ನಿರ್ಧಾರವನ್ನು ಸಂಬಂಧಪಟ್ಟ ಇಲಾಖೆ ತೆಗೆದುಕೊಳ್ಳುತ್ತದೆ. ಘೋಷಣೆಯ ಗಡುವನ್ನು ಈಗ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.