ಸೆ.7 ರಿಂದ 10 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 58ನೇ ವರ್ಷದ ಶ್ರೀ ಗಣೇಶೋತ್ಸವ | ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ ಶೋಭಾಯಾತ್ರೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 58ನೇ ವರ್ಷದ ಶ್ರೀ ಗಣೇಶೋತ್ಸವ ಸೆ.7, 8, 9  ಹಾಗೂ 10 ರಂದು ವಿವಿಧ ಧಾರ್ಮಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಗಣೇಶೋತ್ಸವದಲ್ಲಿ ಸೆ.7 ಶನಿವಾರ ಬೆಳಿಗ್ಗೆ 8 ಕ್ಕೆ ಭಜನೆ, 8.30 ಕ್ಕೆ ಶ್ರೀ ದೇವರ ಪ್ರತಿಷ್ಠೆ, 10 ಕ್ಕೆ ನಡೆಯುವ ಧ್ವಜಾರೋಹಣವನ್ನು ಉದ್ಯಮಿ ವಾಮನ್ ಪೈ ನೆರವೇರಿಸಲಿದ್ದಾರೆ. ಮಧ್ಯಾಹ್ನ 11.30 ಕ್ಕೆ ಗಣಪತಿ ಹವನ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12 ರಿಂದ ಅನ್ನಸಂತರ್ಪಣೆ, ಸಂಜೆ 5 ಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಸಂಜೆ 6 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ವಹಿಸಲಿದ್ದು, ಸುಳ್ಯ ಹಿರಿಯ ಸ್ವಯಂಸೇವಕ ವಿನಯ ಕುಮಾರ್ ಕಂದಡ್ಕ ಧಾರ್ಮಿಕ ಉಪನ್ಯಾಡ ನೀಡುವರು. ನಿವೃತ್ತ ಸೈನಿಕ ಎಂ.ಕೆ.ಎನ್. ಭಟ್, ಪ್ರಗತಿಪರ ಕೃಷಿಕ ಹರಿಯಣ್ಣ ಆಳ್ವ ಮೂಡಂಬೈಲು ಉಪಸ್ಥಿತರಿರುವರು. ರಾತ್ರಿ ಗಂಟೆ 8 ರಿಂದ ರಂಗಪೂಜೆ, ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆಯಾಗಲಿದೆ. ರಾತ್ರಿ 8.30 ರಿಂದ ಪಾಂಚಜನ್ಯ ಯಕ್ಷ ಕಲಾವೃಂದದಿಂದ ‘ಶಿವ ಕಾರುಣ್ಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸೆ.8 ಭಾನುವಾರ ಮಧ್ಯಾಹ್ನ 12 ಕ್ಕೆ ಭಜನೆ, ಅನ್ನಸಂತರ್ಪಣೆ, 12.30 ರಿಂದ ಧೀಶಕ್ತಿ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5 ಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈವಿಧ್ಯ, ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಉಜ್ವಲ್ ಪ್ರಭು ವಹಿಸಲಿದ್ದು, ದೈವನರ್ತಕ, ಸಿವಿಲ್ ಇಂಜಿನಿಯರ್ ಡಾ.ರವೀಶ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡುವರು. ನಿವೃತ್ತ ಸೈನಿಕ ಕೆ.ಸುಂದರ ಗೌಡ ನಡುಬೈಲು, ಪ್ರಗತಿಪರ ಕೃಷಿಕ ರಾಮಕೃಷ್ಣ ಪುಣಚ ಉಪಸ್ಥಿತರಿರುವರು. ರಾತ್ರಿ 8ಕ್ಕೆ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. 8.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುಡ್ಲ ಬೆನಕ ಆರ್ಟ್ಸ್ ಅರ್ಪಿಸುವ ಪೌರಾಣಿಕ ನಾಟಕ ‘ಪೊರಿಪುದಪ್ಪೆ ಜಲದುರ್ಗೆ’ ಪ್ರದರ್ಶನಗೊಳ್ಳಲಿದೆ.































 
 

ಸೆ.9 ಸೋಮವಾರ ಬೆಳಿಗ್ಗೆ 9 ರಿಂದ ಭಜನೆ, ಮಧ್ಯಾಹ್ನ ಅನ್ನಸಂತರ್ಪಣೆ, 2 ರಿಂದ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸಚಿನ್ ಹಾರಕರೆ ವಹಿಸಲಿದ್ದು, ಆರ್‍ ಎಸ್‍ ಎಸ್‍ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್‍ ಪದ್ಮಾರ್ ಧಾರ್ಮಿಕ ಉಪನ್ಯಾಸ ಮಾಡುವರು. ಪುತ್ತೂರು ಉಪತಹಶೀಲ್ದಾರ್ ಕವಿತಾ ಎಸ್‍. ಬಹುಮಾನ ವಿತರಣೆ ಮಾಡುವರು. ಪ್ಯಾರಚೂಟ್ ಸ್ಕೈ ಡೈವಿಂಗ್ ನಿವೃತ್ತ ತರಬೇತುದಾರ ರಾಮಚಂದ್ರ ಪುಚ್ಚೇರಿ, ಕಶೆಕೋಡಿ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಮನೋಜ್ ಶೆಣೈ ಆರ್ಯಮುಗೇರು ಉಪಸ್ಥಿತರಿರುವರು. ರಾತ್ರಿ 8 ರಿಂದ ರಂಗಪೂಜೆ, ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆಯಾಗಲಿದೆ. ರಾತ್ರಿ 8.30 ರಿಂದ ಕುಡ್ಲ ಅಮ್ಮ ಕಲಾವಿದೆರ್ ಅವರಿಂದ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.10 ಮಂಗಳವಾರ ಬೆಳಿಗ್ಗೆ ಭಜನೆ, ಮಧ್ಯಾಹ್ನ 12 ಕ್ಕೆ ಗಣಪತಿ ಹವನ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಕ್ಕೆ ಶ್ರೀ ಗಣೇಶ ವಿಗ್ರಹ ಜಲಸ್ತಂಭನ ಶೋಭಾಯಾತ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಾಗಿ ರೈಲ್ವೇ ನಿಲ್ದಾಣ ರಸ್ತೆಯಾಗಿ ಹಾರಾಡಿ ರೈಲ್ವೇ ಸೇತುವೆ ಬಳಿಯಿಂದ ಶ್ರೀ ಆಂಜನೇಯ ಮಂತ್ರಾಲಯದ ಬಳಿ ಸೇರಿ ಅಲ್ಲಿಂದ ವಿವಿಧ ಸ್ತಬ್ದ ಚಿತ್ರಗಳೊಂದಿಗೆ ಮುಖ್ಯರಸ್ತೆಯಾಗಿ ಬಸ್ ನಿಲ್ದಾಣ, ದರ್ಬೆ ವೃತ್ತ, ಪರ್ಲಡ್ಕ, ಭನಾವಿಶಂಕರ ದೇವಸ್ಥಾನದ ಮೂಲಕ ಕೋರ್ಟ್ ರಸ್ತೆಯಾಗಿ ಮುಖ್ಯರಸ್ತೆಗೆ ಬಂದು ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಸಾಗಿ ಬಳಿಕ ದೇವಸ್ಥಾನದ ರಥಬೀದಿ ಬಳಿಯ ಕೆರೆಯಲ್ಲಿ ಜಲಸ್ತಂಭನವಾಗಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top