ಪುತ್ತೂರು: ಸರಕಾರದ ವಿವಿಧ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೆಲ್ಲಾ ಸೌಲಭ್ಯಗಳು ದೊರೆಯುತ್ತದೆಯೋ ಅವುಗಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣದಲ್ಲಿ ಪ್ರಕಟಿಸಿ ಪ್ರಚಾರ ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ದ ಕ ಜಿಲ್ಲಾ ಪಂಚಾಯತ್, ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೆತ್ರದ ವಿವಿಧ ಕುಶಲ ಕರ್ಮಿಗಳಿಗೆ ಸಲಕರಣೆ ವಿತರಿಸಿ ಮಾತನಾಡಿದರು.
ಯಾವ ಇಲಾಖೆಯಲ್ಲಿ ಯಾವ ಸೌಲಭ್ಯಗಳು ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದೆ. ಕೆಲವರಿಗೆ ಆನ್ ಲೈನ್ ನಲ್ಲಿ ಅರ್ಜಿ ಹಾಕಬೇಕೆಂದು ಗೊತ್ತೇ ಇರುವುದಿಲ್ಲ ಮತ್ತು ಯಾವಾಗ ಅರ್ಜಿ ಹಾಕಬೇಕು ಎಂಬ ಮಾಹಿತಿಯೂ ಇರುವುದಿಲ್ಲ ಈ ಕಾರಣಕ್ಕೆ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸರಕಾರದಿಂದ ಸಿಗುವ ಸೌಲಭ್ಯಗಳು ಕೆಲವರಿಗೇ ಮಾತ್ರ ಮೀಸಲು ಎಂಬಂತಾಗಬಾರದು ಎಂದು ಹೇಳಿದ ಶಾಸಕರು ಪ್ರತೀ ಇಲಾಖೆಯು ತಮ್ಮ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಧ್ಯಮ ಹಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಪ್ರಚಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 91 ವಿವಿಧ ಕುಶಲ ಕಾರ್ಮಿಕರಿಗೆ ಟೈಲರಿಂಗ್ ಯಂತ್ರ, ಕಾರ್ಪೆಂಟರ್ ಕಿಟ್, ಎಲೆಕ್ಟ್ರಿಕಲ್ ಕಿಟ್ ಸೇರಿದಂತೆ ಹಲವು ವಿಧದ ಕಿಟ್‌ಗಳನ್ನು ವಿತರಿಸಲಾಯಿತು.