ಪಾರಾ ಒಲಿಂಪಿಕ್ ಕೂಟದಲ್ಲಿ ನಿತೇಶ್ ಬರೆದರು ರೋಚಕ ಅಧ್ಯಾಯ

ಚಿನ್ನದ ಪದಕ ತಂದು ಕೊಟ್ಟ ಅಪಘಾತದಲ್ಲಿ ಕಾಲು ಕಳೆದುಕೊಂಡ ನಿತೇಶ್

ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಾರಾ ಒಲಿಂಪಿಕ್ಸ್ ಕ್ರೀಡೆಗಳು ಭಾರತಕ್ಕೆ ಬಂಗಾರದ ಬೆಳೆಯನ್ನೇ ತಂದುಕೊಡುತ್ತಿವೆ. ಮೊನ್ನೆ ಮೊನ್ನೆ ವೀಲ್‌ಚೇರ್ ಮೇಲೆ ಕುಳಿತು ಮುದ್ದು ನಗುವಿನ ಅವನಿ ಲಕೀರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದದ್ದು ನಮಗೆ ಮರೆತು ಹೋಗುವ ಮೊದಲೇ ನಮ್ಮದೇ ಭಾರತದ ನಿತೇಶ್ ಕುಮಾರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಶ್ವವಿಜಯಿ ಆಗಿ ಮೂಡಿಬಂದಿದ್ದಾರೆ.

2009ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ತನ್ನ ಎಡಗಾಲು ಕಳೆದುಕೊಂಡ ಆತ ಇಂದು ಅಸಾಮಾನ್ಯ ಹೋರಾಟವನ್ನು ಸಂಘಟಿಸಿ ವಿಶ್ವಮಟ್ಟಕ್ಕೆ ತಲುಪಿದ್ದು, ಪಾರಾ ಒಲಿಂಪಿಕ್ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದದ್ದು ನಿಜಕ್ಕೂ ಒಂದು ಅದ್ಭುತ ಅಧ್ಯಾಯ ಎಂದೇ ಹೇಳಬಹುದು.































 
 

ಸೈನಿಕನ ಮಗನ ರಕ್ತದಲ್ಲಿಯೇ ಹೋರಾಟದ ಜೀನ್ ಬಂದಿತ್ತು

1994ರ ಡಿಸೆಂಬರ್ 30ರಂದು ರಾಜಸ್ಥಾನದ ಬಸ್‌ಕೀರ್ತನ್ ಎಂಬ ಪುಟ್ಟ ನಗರದಲ್ಲಿ ಒಬ್ಬ ನೇವಿ ಆಫೀಸರ್ ಮಗನಾಗಿ ಹುಟ್ಟಿದ ನಿತೇಶ್ ಕುಮಾರ್ ಬಾಲ್ಯದಲ್ಲಿ ಕಲಿಕೆಯಲ್ಲಿ ಭಾರಿ ಮುಂದಿದ್ದರು. ಫುಟ್‌ಬಾಲ್ ಅವರ ಆಸಕ್ತಿಯ ಕ್ಷೇತ್ರ ಆಗಿತ್ತು. ಮೈದಾನಕ್ಕೆ ಇಳಿದರೆ ಎಂದಿಗೂ ದಣಿಯದ ಮತ್ತು ಎಂದಿಗೂ ಸೋಲದ ಇಚ್ಛಾಶಕ್ತಿ ಅವರಲ್ಲಿ ರಕ್ತದಲ್ಲಿ ಬಂದಿತ್ತು ಅನ್ನಿಸುತ್ತದೆ. ಫುಟ್‌ಬಾಲ್ ಮತ್ತು ಕೇವಲ ಫುಟ್‌ಬಾಲ್ ಅವರ ಕನಸಾಗಿತ್ತು.
ಸಾವಿರಾರು ಕನಸುಗಳು ರೆಕ್ಕೆಬಿಚ್ಚಿ ಹಾರುವ ದಿನಗಳು ಅವು.

2009ರ ಭೀಕರ ರೈಲು ಅಪಘಾತ…

ಐಐಟಿ ಮೂಲಕ ಇಂಜಿನಿಯರಿಂಗ್ ಪದವಿ ಪಡೆಯುವ ಪ್ರವೇಶ ಪರೀಕ್ಷೆಯ ಗಂಭೀರ ತಯಾರಿಯಲ್ಲಿ ತೊಡಗಿದ್ದ 15ರ ಹುಡುಗನ ಕನಸುಗಳಿಗೆ ಕೊಳ್ಳಿ ಇಟ್ಟ ಹಾಗೆ ವಿಶಾಖಪಟ್ಟಣದಲ್ಲಿ ಒಂದು ಭೀಕರ ರೈಲು ಅಪಘಾತ ನಡೆದೇ ಬಿಟ್ಟಿತ್ತು. ನಿತೀಶ್ ಇದ್ದ ರೈಲು ಬೋಗಿ ಪೂರ್ತಿ ಜಖಂ ಆಗಿ ಆತನ ಎಡಗಾಲು ಮಂಡಿಯ ಕೆಳಗೆ ಪೂರ್ತಿ ತುಂಡಾಯಿತು. ಹಲವು ತಿಂಗಳು ಆಸ್ಪತ್ರೆಯ ಹಾಸಿಗೆಯಲ್ಲಿ ನೋವು, ನರಳಾಟ ನಿಲ್ಲಲಿಲ್ಲ. ಗಾಯ ಗುಣವಾಗಲು ಆರು ತಿಂಗಳು ಬೇಕಾಯಿತು. ಅದರಿಂದಾಗಿ ಐಐಟಿ ಪ್ರವೇಶ ಪರೀಕ್ಷೆಯ ಸಿದ್ಧತೆಯು ಒಂದು ವರ್ಷ ಮುಂದೆ ಹೋಯಿತು.

ಮುಂದೆ ಪುಣೆಯಲ್ಲಿ ತುಂಡಾದ ಕಾಲಿಗೆ ಕೃತಕವಾದ ಲಿಂಬ್ ಜೋಡಿಸಲಾಯಿತು. ಮಂಡಿ ಐಐಟಿಯಲ್ಲಿ ಮೆರಿಟ್ ಸೀಟ್ ಕೂಡ ದೊರೆಯಿತು. ಅದುವರೆಗೆ ಫುಟ್‌ಬಾಲ್ ಬಗ್ಗೆ ಇದ್ದ ಕನಸು ಬ್ಯಾಡ್ಮಿಂಟನ್ ಕಡೆಗೆ ಹೊರಳಿದ್ದು ಅದೇ ಅವಧಿಯಲ್ಲಿ. ಒಬ್ಬ ಯಂಗ್ ಐಐಟಿಯನ್ ಷಟ್ಲ್ ರಾಕೆಟ್ ಹಿಡಿದು ಕೋರ್ಟಿಗೆ ಇಳಿದು ಬೆವರು ಬಸಿಯುವುದನ್ನು ಕ್ರೀಡಾಪ್ರೇಮಿಗಳು ಭಾರೀ ಅಚ್ಚರಿಯಿಂದ ನೋಡಿದರು.

ವಿಧಿಯನ್ನು ಶಪಿಸುತ್ತಾ ಒಂದು ದಿನವೂ ಕುಳಿತುಕೊಳ್ಳದ ನಿತೇಶ್ ಒಬ್ಬ ಪಾರಾ ಶಟ್ಲರ್ ಆಗಿ 2015ರ ಹೊತ್ತಿಗೆ ನ್ಯಾಶನಲ್ ಮಟ್ಟದಲ್ಲಿ ಆಡಲು ಆರಂಭ ಮಾಡಿದ್ದರು. ಪಾರಾ ಕ್ರೀಡೆಗಳಿಗೆ ಬಳಸುವ ಷಟ್ಲ್‌ ಕೋಋಟ್‌ ಅಗಲ ಕಡಿಮೆ ಇರುವುದು ಅನುಕೂಲವೇ ಹೌದು. ಆದರೆ ಕೋಋಟ್‌ ಪೂರ್ತಿ ಒಂದು ಕಾಲಿನ ಬಲದಲ್ಲಿ ಚಲಿಸುವುದು ಸುಲಭದ ಮಾತಾಗಿರಲಿಲ್ಲ. ದೇಹದ ಸಮತೋಲನ ಕಾಪಾಡುವುದು ಇನ್ನೂ ದೊಡ್ಡ ಸವಾಲು. ಆದರೆ ನಿತೇಶ್ ಇಚ್ಛಾಶಕ್ತಿಯ ಮುಂದೆ ಯಾವ ಸವಾಲೂ ಉಳಿಯಲಿಲ್ಲ ಅನ್ನುವುದು ಭಾರತದ ಅದೃಷ್ಟ.

ನಿತೇಶ್ ಕ್ರಮಿಸಿದ್ದು ದುರ್ಗಮ ಹಾದಿ

2016ರ ನ್ಯಾಶನಲ್ ಪಾರಾ ಕ್ರೀಡೆಗಳಲ್ಲಿ ಹರ್ಯಾಣ ರಾಜ್ಯವನ್ನು ಪ್ರತಿನಿಧಿಸಿದ ನಿತೇಶ್ ಮೊದಲ ಪ್ರಯತ್ನದಲ್ಲಿಯೇ ಚಿನ್ನ ಗೆದ್ದರು. 2017ರಲ್ಲಿ ಐರಿಷ್ ಕೂಟದಲ್ಲಿ ಚಿನ್ನವನ್ನು ಗೆದ್ದರು. 2020ರಲ್ಲಿ ನ್ಯಾಶನಲ್ ಪಾರಾ ಕೂಟದಲ್ಲಿ ಚಿನ್ನವನ್ನು ಗೆದ್ದಾಗ ಆತ ಸೋಲಿಸಿದ್ದು ಟೋಕಿಯೋ ಪಾರಾ ಒಲಿಂಪಿಕ್ಸ್ ಕೂಟದ ಚಿನ್ನದ ಪದಕ ವಿಜೇತ ಪ್ರಮೋದ್ ಅವರನ್ನು ಅಂದಾಗ ಇಡೀ ಜಗತ್ತು ನಿತೇಶ್ ಕಡೆಗೆ ಕುತ್ತಿಗೆ ಹೊರಳಿಸಿ ನೋಡಿತು. ಮುಂದೆ ಏಷ್ಯಾಮಟ್ಟದಲ್ಲಿ ಮೂರು ಪದಕಗಳು ದೊರೆತವು. ವಿಶ್ವಚಾಂಪಿಯನ್ ಕೂಟದಲ್ಲಿ ಎರಡು ಬಾರಿ ಬೆಳ್ಳಿ, ಒಂದು ಬಾರಿ ಕಂಚು ಒಲಿದು ಬಂದವು. ಡಬಲ್ಸ್ ವಿಭಾಗದಲ್ಲಿ ಕೂಡ ನಿತೇಶ್ ಐದು ಬಾರಿ ವಿಶ್ವಮಟ್ಟದ ಪ್ರಶಸ್ತಿ ಗೆದ್ದಿದ್ದಾರೆ.

ಈ ಸಾಧನೆಗಳಿಗೆಲ್ಲಾ ಕಿರೀಟ ಸದೃಶವಾಗಿ ಈ ಬಾರಿಯ ಪಾರಾ ಒಲಿಂಪಿಕ್ ಚಿನ್ನದ ಪದಕ ದೊರಕಿದೆ. ಈ ಸೋಮವಾರ ಅವರು ಸೋಲಿಸಿದ್ದು ಇಂಗ್ಲಂಡ್ ದೇಶದ ದೈತ್ಯ ಆಟಗಾರ ಡೇನಿಯಲ್ ಬಾಥಲ್‌ರನ್ನು. ಆ ಪಂದ್ಯವನ್ನು ಕಣ್ಣು ತುಂಬಿಸಿಕೊಂಡ ಭಾರತೀಯರಿಗೆ ಅದು ಯಾವತ್ತೂ ಮರೆತುಹೋಗುವುದಿಲ್ಲ. ಹಾಗೆಯೇ ನಿತೇಶ್ ಕುಮಾರ್ ಅವರ ಹೋರಾಟದ ಕಿಚ್ಚು ಕೂಡ.
ಅವರೀಗ ಹರ್ಯಾಣ ರಾಜ್ಯದ ಯುವ ಆಟಗಾರರಿಗೆ ಬ್ಯಾಡ್ಮಿಂಟನ್ ಕೋಚ್ ಕೂಡ ಆಗಿದ್ದಾರೆ. ಇನ್ನೂ 29 ವರ್ಷ ಪ್ರಾಯದ ಅವರಿಂದ ಭಾರತ ಇನ್ನೂ ಹೆಚ್ಚಿನ ಸಾಧನೆ ನಿರೀಕ್ಷೆ ಮಾಡಬಹುದು.
ಅಭಿನಂದನೆ ಬಾರ್ನ್ ಚಾಂಪ್!

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top