ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನಲ್ಲಿ ಐದು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಭಾರತೀಯರು ಜೀವಂತ ಸುಟ್ಟು ಕರಕಲಾಗಿದ್ದಾರೆ.
ಶುಕ್ರವಾರ ಅರ್ಕಾನ್ಸಾಸ್‌ನ ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಹೊತ್ತಿ ಉರಿದು ಒಳಗಿದ್ದವರು ಜೀವಂತ ದಹನವಾಗಿದ್ದಾರೆ. ಮೃತರ ಗುರುತು ಖಚಿತಪಡಿಸಲು ಅಧಿಕಾರಿಗಳು ಡಿಎನ್ಎ ಪರೀಕ್ಷೆ ಮಾಡಿಸಬೇಕಾಯಿತು.
ಮೃತರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ.
ಓರಂಪತಿ ಮತ್ತು ಅವರ ಸ್ನೇಹಿತ ಶೇಕ್ ಡಲ್ಲಾಸ್‌ನಲ್ಲಿರುವ ತನ್ನ ಸೋದರ ಸಂಬಂಧಿಯನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು. ಲೋಕೇಶ್ ಪಾಲಾಚಾರ್ಲ ಪತ್ನಿಯನ್ನು ಭೇಟಿಯಾಗಲು ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದರು. ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ದರ್ಶಿನಿ ವಾಸುದೇವನ್ ಬೆಂಟನ್‌ವಿಲ್ಲೆಯಲ್ಲಿರುವ ತನ್ನ ಚಿಕ್ಕಪ್ಪನನ್ನು ಭೇಟಿ ಮಾಡಲು ಹೋಗುತ್ತಿದ್ದರು.
ಓರಂಪತಿ ತಂದೆ ಸುಭಾಷ್ ಚಂದ್ರ ರೆಡ್ಡಿ ಅವರು ಹೈದರಾಬಾದ್ ಮೂಲದ ಮ್ಯಾಕ್ಸ್ ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಆರ್ಯನ್ ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಟೆಕ್ಸಾಸ್ ವಿಶ್ವವಿದ್ಯಾನಲಯದಲ್ಲಿ ಘಟಿಕೋತ್ಸವಕ್ಕಾಗಿ ಅವರ ಪೋಷಕರು ಮೇ ತಿಂಗಳಲ್ಲಿ ಅಮೆರಿಕದಲ್ಲಿದ್ದರು. ಘಟಿಕೋತ್ಸವದ ನಂತರ ಅವರು ಭಾರತಕ್ಕೆ ಮರಳುವುದಿತ್ತು ಎಂದು ಸಂಬಂಧಿಕರು ಹೇಳಿದ್ದಾರೆ.
ವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಭಾರತೀಯರಿದ್ದ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಕಾರಿನಲ್ಲಿ ಬೆಂಕಿ ಹೊತ್ತಿ ಉರಿದಿದೆ.