ದನಗಳ್ಳನೆಂದು ಭಾವಿಸಿ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದ ಗೋರಕ್ಷಕರು

ಚಂಡೀಗಢ: ದನಗಳ್ಳನೆಂದು ಭಾವಿಸಿ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಗೋರಕ್ಷಕರು ಕಾರಿನಲ್ಲಿ 30 ಕಿ.ಮೀ. ಹಿಂಬಾಲಿಸಿ ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.
ಆರ್ಯನ್ ಮಿಶ್ರಾ ದುಷ್ಕರ್ಮಿಗಳ ದಾಳಿಗೆ ಬಲಿಯಾದ ದುರ್ದೈವಿ. ಆಗಸ್ಟ್ 23ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ.
ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವರು ಜಾನುವಾರುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿದೆ. ಆರೋಪಿಗಳು ಈ ವೇಳೆ ಕಾರಿನಲ್ಲಿ ಹೋಗುತ್ತಿದ್ದ ಆರ್ಯನ್ ಮಿಶ್ರಾ ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30 ಕಿಲೋಮೀಟರ್ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಾರನ್ನು ಹಿಂಬಾಲಿಸಿ ಚಾಲಕ ಹರ್ಷಿತ್‌ಗೆ ನಿಲ್ಲಿಸುವಂತೆ ಹೇಳಿದ್ದಾರೆ. ಗೂಂಡಾಗಳು ತಮ್ಮನ್ನು ಹತ್ಯೆ ಮಾಡಲು ಬೆನ್ನಟ್ಟುತ್ತಿದ್ದಾರೆ ಎಂದು ಭಾವಿಸಿ ವಿದ್ಯಾರ್ಥಿಗಳು ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.
ಕಾರು ನಿಲ್ಲಿಸದೆ ಇದ್ದಾಗ ಆರೋಪಿಗಳು ಕಾರಿನತ್ತ ಗುಂಡು ಹಾರಿಸಿದ್ದು, ಗುಂಡು ಆರ್ಯನ್ ಕುತ್ತಿಗೆಗೆ ತಗುಲಿದೆ. ಬಳಿಕ ಕಾರು ನಿಲ್ಲಿಸಿದಾಗ ಕಾರಿನಲ್ಲಿ ಹುಡುಗಿಯರು ಇರುವುದನ್ನು ನೋಡಿ ಆರೋಪಿಗಳು ತಪ್ಪಾದ ಕಾರು ಎಂದು ಅರಿವಾಗಿ ಪರಾರಿಯಾಗಿದ್ದರು.
ಆರ್ಯನ್‍ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆತ ಒಂದು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top