ಬದುಕು ಕೂಡ ಕ್ರಿಕೆಟ್‌ನಂತೆ ಅನಿಶ್ಚಿತೆತಗಳ ಮೂಟೆ

ಕ್ರಿಕೆಟ್‌ನಲ್ಲಿ ಪ್ರಿಡಿಕ್ಷನ್ ನಡೆಯುವುದಿಲ್ಲ, ಬದುಕಿನಲ್ಲಿ ಕೂಡ

ಕ್ರಿಕೆಟ್ ಆಟ ಬಹಳಷ್ಟು ವಿಶೇಷತೆಯನ್ನು ಪಡೆದಿದೆ. ಅದಕ್ಕೆ ಕಾರಣ ಏನೆಂದರೆ ಅದರ ಒಳಗೆ ಅಡಗಿರುವ ಅನಿಶ್ಚಿತತೆ (Uncertainty) ಮತ್ತು ವಿಕಲ್ಪಗಳು (Combinations). ಅವು ನಮ್ಮ ಬದುಕಿನ ಪ್ರತಿಫಲನದ ಕನ್ನಡಿಗಳು ಕೂಡ ಆಗಿವೆ!

ಜಗತ್ತಿನ ಬಲಾಢ್ಯ ಕ್ರಿಕೆಟ್ ತಂಡವಾದ ಭಾರತವನ್ನು ಕ್ರಿಕೆಟ್ ಶಿಶುಗಳಾದ ಬಾಂಗ್ಲಾದೇಶ ಸೋಲಿಸಿದ ಉದಾಹರಣೆ ಇಲ್ಲವೇ?































 
 

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದು ಹೀಗೆ ಆಗಬೇಕು, ಹಾಗೆಯೇ ಆಗಬೇಕು ಎಂದು. ಆದರೆ ಅದು ಹಾಗೆ ಆಗುವುದಿಲ್ಲ. ಹೀಗೆ ಕೂಡ ಆಗಲೇ ಬೇಕು ಅಂದಿಲ್ಲ. ಯಾಕೆಂದರೆ ವಿಧಿಯ ನಿರ್ಧಾರ ಬೇರೆಯೇ ಇರುತ್ತದೆ.

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅವನು/ಅವಳು ಹೀಗೇ ಇರಬೇಕು, ಹಾಗೆಯೇ ಇರಬೇಕು ಎಂದು. ಅವನು/ಅವಳು ನೀವು ಅಂದುಕೊಂಡ ಹಾಗೆಯೇ ಯಾಕಿರಬೇಕು? ಅವನು ಅವನೇ, ಅವಳು ಅವಳೇ.

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅದೊಂದು ಘಟನೆ ನನ್ನ ಜೀವನದಲ್ಲಿ ನಡೆಯದೇ ಹೋಗಿದ್ದರೆ ಚೆನ್ನಾಗಿತ್ತು ಎಂದು. ಆದರೆ ಸ್ವಲ್ಪ ಕೂತು ಯೋಚನೆ ಮಾಡಿ. ಅದೇ ಘಟನೆ ನಿಮಗೆ ಲಾಂಗ್ ರೇಂಜ್‌ನಲ್ಲಿ ಅದ್ಭುತ ಫಲಿತಾಂಶವನ್ನು ಕೊಟ್ಟಿರುತ್ತದೆ.

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ, ಅದೊಂದು ಸೋಲು ನನಗೆ ಬಾರದೆ ಹೋಗಿದ್ದರೆ ಚೆನ್ನಾಗಿತ್ತು ಎಂದು. ಜಗತ್ತಿನ ಯಾವುದೇ ಆಟದಲ್ಲಿ ಎಲ್ಲರೂ, ಎಲ್ಲ ಕಾಲಕ್ಕೂ ಗೆಲ್ಲಲು ಸಾಧ್ಯವಿದೆಯೇ? ಸೋಲು ನಮಗೆ ಒಂದಲ್ಲ ಒಂದು ಗಟ್ಟಿ ಅನುಭವ ಕೊಟ್ಟಿರುತ್ತದೆ. ಎಷ್ಟೋ ಬಾರಿ ನಮ್ಮ ತಪ್ಪು ನಡೆಗಳೇ ನಮ್ಮನ್ನು ಗೆಲ್ಲಿಸುತ್ತವೆ.

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದೊಂದು ನಿರ್ಧಾರ ತಪ್ಪಾಗಿ ಹೋಯಿತಲ್ಲ ಎಂದು. ಆದರೆ ನಿರ್ಧಾರ ಸರಿಯಾ, ತಪ್ಪಾ ಎಂದು ಗೊತ್ತಾಗುವುದು ಫಲಿತಾಂಶ ಬಂದ ನಂತರ ಅಲ್ವಾ.

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅವನನ್ನು ಅಥವಾ ಅವಳನ್ನು ನಂಬಿ ಮೋಸಹೋದೆ ಎಂದು. ಆದರೆ ನೀವು ಸೋಲಲು ಕಾರಣ ನೀವು ಅಲ್ಲ. ತಪ್ಪು ವ್ಯಕ್ತಿಗಳ ಮೇಲೆ ನೀವು ಇಟ್ಟ ಅತಿಯಾದ ನಂಬಿಕೆ. ಇದು ಗೊತ್ತಾದರೆ ನೀವು ಮುಂದೆ ಜಾಗ್ರತೆ ವಹಿಸುವುದಿಲ್ಲವೆ?

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು. ಆದರೆ ನಮ್ಮನ್ನು ತುಂಬಾ ಪ್ರೀತಿ ಮಾಡುವವರು ಮತ್ತು ಅರ್ಥ ಮಾಡಿಕೊಳ್ಳುವವರು ನಮ್ಮ ಪಕ್ಕದಲ್ಲಿಯೇ ಇರುತ್ತಾರೆ. ನಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವ ನಾವು ಉಳಿದವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ?

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನ ಅದೃಷ್ಟ, ಗ್ರಹಚಾರವೇ ಸರಿ ಇಲ್ಲ ಎಂದು. ಆದರೆ ನಮ್ಮ ಗೇಮ್ ಪ್ಲಾನ್ ಮತ್ತು ಪ್ರಯತ್ನದಲ್ಲಿ ತಪ್ಪುಗಳು ಇರುತ್ತವೆ. ಅದನ್ನು ಮೊದಲು ಸರಿಪಡಿಸಬೇಕು ತಾನೇ?

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವನು ಅಥವಾ ಅವಳು ನನಗೆ ಸಪೋರ್ಟ್ ಮಾಡಲಿಲ್ಲ ಎಂದು. ಆದರೆ ಯೋಚನೆ ಮಾಡಿ, ತನ್ನ ಮೇಲೆ ಭರವಸೆ ಇಡದೆಯೇ ಬೇರೆಯವರನ್ನು ನಾವು ಹೆಚ್ಚು ಅವಲಂಬನೆ ಮಾಡಿದ್ದು ತಪ್ಪಲ್ಲವೇ?

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ವಿರಾಟ್ ಕೊಹ್ಲಿ ಹಾಗೆ ಮಾಡಿದ್ದು ತಪ್ಪು. ಹೀಗೆ ಮಾಡಬೇಕಿತ್ತು ಎಂದು. ಆದರೆ ಗಮನಿಸಿ ಕೊಹ್ಲಿ ಆ ನಿರ್ಧಾರ ತೆಗೆದುಕೊಂಡದ್ದು ಕ್ರಿಕೆಟ್ ಗ್ರೌಂಡಲ್ಲಿ. ಕೋಟಿ ಕೋಟಿ ಜನರ ಮುಂದೆ ಮತ್ತು ನೂರಾರು ಟಿವಿ ಕ್ಯಾಮೆರಾಗಳ ಎದುರು. ಆಗ ಅವನಿಗೆ ಗೈಡ್ ಮಾಡಲು ಅಲ್ಲಿ ಯಾರಿದ್ದರು?

xr:d:DAFKqYyS9R8:3337,j:7017017632574179913,t:23111619

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವಳು ಅವನನ್ನು ಯಾಕೆ ಮದುವೆ ಆದಳು? ಅವನು ಅವಳನ್ನು ಯಾಕೆ ಮದುವೆ ಆದ? ಅದು ಅವರವರ ಖಾಸಗಿ ಬದುಕು. ಪ್ರತಿಯೊಬ್ಬರ ಆದ್ಯತೆಗಳು ಬೇರೆ ಬೇರೆಯೇ ಇರುತ್ತವೆ. ಎಲ್ಲರೂ ನಮ್ಮ ಹಾಗೆ ಎಂದು ಯಾಕೆ ಯೋಚನೆ ಮಾಡಬೇಕು? ಅವರನ್ನು ಪ್ರಶ್ನೆ ಮಾಡಲು ನಾವು ಯಾರು?

ಎಷ್ಟೋ ಬಾರಿ ಒಂದು ರಿಯಾಲಿಟಿ ಶೋ ಅಥವಾ ಸ್ಪರ್ಧೆ ಮುಗಿದಾಗ ನಾವು ಹೇಳುತ್ತೇವೆ ಏನೆಂದರೆ ತೀರ್ಪುಗಾರರು ಅನ್ಯಾಯ ಮಾಡಿದರು ಎಂದು. ಆದರೆ ಅವರ ಮುಂದೆ ಹಲವು ಮಾನದಂಡ ಇರುತ್ತದೆ ಮತ್ತು ಸ್ಕೋರ್‌ಶೀಟ್ ಇರುತ್ತದೆ ಎಂಬುದನ್ನು ನಾವು ಮರೆತಿರುತ್ತೇವೆ. ಒಂದು ಸ್ಪರ್ಧೆ ನಾವು ವೀಕ್ಷಕರಾಗಿ ನೋಡುವುದಕ್ಕೂ, ತೀರ್ಪುಗಾರನಾಗಿ ನೋಡುವುದಕ್ಕೂ ಅಜಗಜಾಂತರ ಇರುತ್ತದೆ ಎಂದು ನಮಗೆ ಅರ್ಥ ಆದರೆ ಎಷ್ಟೋ ನೋವುಗಳು ಕಡಿಮೆ ಆಗುತ್ತವೆ.

ಒಟ್ಟಿನಲ್ಲಿ ನಾನು ಹೇಳಲು ಹೊರಟದ್ದು ಏನೆಂದರೆ ನಮ್ಮ ಬದುಕು ಇದೇ ರೀತಿಯ ಅನಿಶ್ಚಿತತೆಗಳ ಮೂಟೆ. ಇಲ್ಲಿ ಕೆಲವು ಸಂಗತಿಗಳು ನಾವು ಪ್ರಿಡಿಕ್ಟ್ ಮಾಡಿದ ಹಾಗೆ ನಡೆಯುವುದಿಲ್ಲ. ನಡೆಯಬೇಕು ಅಂತ ಕೂಡ ಇಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನೂರಾರು ಟಿವಿ
ಕ್ಯಾಮೆರಾಗಳ ಮುಂದೆ ಅಂಪಾಯರ್ ಒಂದೇ ಒಂದು ತಪ್ಪು ತೀರ್ಪನ್ನು ಕೊಟ್ಟಿರುತ್ತಾನೆ. ಆಗ ತಂಡಗಳ DRS ಆಯ್ಕೆ ಮುಗಿದಿರುತ್ತದೆ. ಆ ತೀರ್ಪು ಪಂದ್ಯದ ಫಲಿತಾಂಶವನ್ನು ಬದಲಾವಣೆ ಮಾಡುತ್ತದೆ. ಈ ಅನುದ್ದೇಶಿತ ತಪ್ಪುಗಳೇ ಕ್ರಿಕೆಟ್ ಆಟದ ಬ್ಯೂಟಿ ಆಗಿರುತ್ತವೆ.

That’s the BEAUTY of CRICKET.
And that’s the BEAUTY of LIFE too!

ಕ್ರಿಕೆಟ್ ಮತ್ತು ಬದುಕು ಎರಡೂ ಅನಿಶ್ಚಿತತೆಗಳ ಮೂಟೆ ಎನ್ನುವುದೇ ಇಂದಿನ ಭರತವಾಕ್ಯ.

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top