ಇದು ಬಹಳ ಕಡಿಮೆ ಮೊತ್ತ ಎಂದ ಸಿಎಂಒ ಕಚೇರಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯ ಅಧಿಕೃತ ಮತ್ತು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ತಿಂಗಳಿಗೆ ಸುಮಾರು 54 ಲಕ್ಷ ರೂಪಾಯಿ, ಅಂದರೆ ವರ್ಷಕ್ಕೆ ಸುಮಾರು 6.5 ಕೋ. ರೂ. ಖರ್ಚು ಮಾಡಲಾಗುತ್ತದೆ ಎಂಬುದು ಆರ್ಟಿಐ ಕಾರ್ಯಕರ್ತರು ಸಲ್ಲಿಸಿದ ಅರ್ಜಿಗೆ ದೊರೆತ ಉತ್ತರದಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುವಾಗ ಮುಖ್ಯಮಂತ್ರಿ ಕಚೇರಿ ಇಷ್ಟೊಂದು ಮೊತ್ತದ ಹಣವನ್ನು ಕೇವಲ ಪ್ರಚಾರಕ್ಕೆ ಬಳಸಿಕೊಂಡಿರುವ ಬಗ್ಗೆ ಆರ್ಟಿಐ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಣದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರ ಬಿಲ್ ಕ್ಲಿಯರ್ ಮಾಡಲು ಹೆಣಗಾಡುತ್ತಿದೆ. ಆದರೆ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಗೆ ಭಾರಿ ವೆಚ್ಚ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರ್ಟಿಐ ಕಾರ್ಯಕರ್ತ ಮಾರಲಿಂಗಗೌಡಮಾಲಿ ಪಾಟೀಲ್ ಎಂಬವರು ಮುಖ್ಯಮಂತ್ರಿಯ ಸೋಷಿಯಲ್ ಮೀಡಿಯಾ ಖರ್ಚಿನ ವಿವರ ಕೇಳಿದ್ದರು.
ಹಿಂದಿನ ಮುಖ್ಯಮಂತ್ರಿಗಳು ತಿಂಗಳಿಗೆ 2 ಕೋಟಿ ರೂ.ನಂತೆ ಖರ್ಚು ಮಾಡುತ್ತಿದ್ದರು. ಅದಕ್ಕೆ ಹೋಲಿಸಿದರೆ ಈ ಮೊತ್ತ ತೀರಾ ಕಡಿಮೆ ಎಂದು ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎ) ಪ್ರಕಾರ ಸಿಎಂಒ ಕಳೆದ ವರ್ಷ ಅಕ್ಟೋಬರ್ 25 ರಿಂದ 2024ರ ಮಾರ್ಚ್ ರವರೆಗೆ ಸುಮಾರು 3 ಕೋಟಿ ರೂ. ಖರ್ಚು ಮಾಡಿದೆ. ಸಿಎಂಒ ಪ್ರತಿ ತಿಂಗಳು ಶೇ.18 ಜಿಎಸ್ಟಿ ಸೇರಿದಂತೆ ಸುಮಾರು 53.9 ಲಕ್ಷ ರೂ. ಪಾವತಿಸಿದೆ. ಸುಮಾರು 35 ಜನರ ಸಮರ್ಪಿತ ತಂಡದೊಂದಿಗೆ ಸಿದ್ದರಾಮಯ್ಯ ಅವರ ಖಾತೆಗಳನ್ನು ನಿರ್ವಹಿಸುವ ದಿ ಪಾಲಿಸಿ ಫ್ರಂಟ್ ಕಂಪನಿಗೆ ಪಾವತಿಗಳನ್ನು ಮಾಡಲಾಗಿದೆ.