ಇಂದು ಮುಗಿಯುತ್ತಾ ಸಿದ್ದರಾಮಯ್ಯ ವಿಚಾರಣೆ?
ಬೆಂಗಳೂರು : ಮುಡಾದಿಂದ 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು ಮತ್ತೆ ಕೋರ್ಟ್ ಅಗ್ನಿಪರೀಕ್ಷೆಯಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದು ಕೋರಿ ಸಿದ್ದರಾಮಯ್ಯನವರು ಕಾನೂನು ಸಮರ ನಡೆಸುತ್ತಿದ್ದು, ಇಂದು ಅದು ಅಂತಿಮ ಘಟ್ಟಕ್ಕೆ ತಲುಪುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠದಲ್ಲಿ ಮತ್ತೆ ವಿಚಾರಣೆ ಮುದುವರಿಯಲಿದೆ. ಎಲ್ಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.
ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಕಾರ್ಯದರ್ಶಿ ಪರ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ. ಇಂದು ಕೂಡ ವಾದ-ಪ್ರತಿವಾದ ಹೈವೋಲ್ಟೇಜ್ ಸೃಷ್ಟಿಸುವ ಸಾಧ್ಯತೆಯಿದೆ. ಆಗಸ್ಟ್ 31ರಂದು ನಡೆದಿದ್ದ ವಿಚಾರಣೆಯಲ್ಲಿ ಎರಡು ಕಡೆಯ ವಕೀಲರು ಹಲವು ಅಂಶಗಳನ್ನು ಮುಂದಿಟ್ಟು ವಾದ ಪ್ರತಿವಾದ ನಡೆಸಿದ್ದರು.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ವಿವೇಚನೆ ಬಳಸಿಲ್ಲ, ಭ್ರಷ್ಟಾಚಾರ ಕಾಯ್ದೆ ಸೆಕ್ಷನ್ 17ಎ ಅಡಿ ಮಾನದಂಡ ಪಾಲನೆ ಮಾಡಿಲ್ಲ, ಪ್ರಾಸಿಕ್ಯೂಷನ್‌ಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ, ಟಿ.ಜೆ.ಅಬ್ರಹಾಂ ಅರ್ಜಿ ಸಂಬಂಧ ಮಾತ್ರ ಸಿಎಂಗೆ ಶೋಕಾಸ್ ನೋಟಿಸ್, ಉಳಿದ ಇಬ್ಬರ ಅರ್ಜಿದಾರರ ಸಂಬಂಧ ಶೋಕಾಶ್ ನೋಟಿಸ್ ನೀಡಿಲ್ಲ, ಸಚಿವ ಸಂಪುಟ ನಿರ್ಣಯವನ್ನು ರಾಜ್ಯಪಾಲರು ಪರಿಗಣಿಸಿಲ್ಲ ಎಂದು ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಲಾಗಿದೆ.
ಸೆಕ್ಷನ್ 17(A) ಪ್ರಕಾರ ಮೇಲ್ನೋಟಕ್ಕೆ ಅಪರಾಧ ಅಂಶಗಳನ್ನು ಪರಿಗಣಿಸಬೇಕು, ಈ ಹಂತದಲ್ಲಿ ಶೋಕಾಸ್ ನೋಟಿಸ್ ನೀಡಲೇಬೇಕೆಂಬ ನಿಯಮವಿಲ್ಲ, ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ಎಂಬವರಿಂದ ದೂರು ಸಲ್ಲಿಕೆಯಾಗಿದೆ, ಈ ಮೂವರು ಸಿಎಂ ವಿರುದ್ಧ ಒಂದೇ ರೀತಿ ಆರೋಪ ಮಾಡಿದ್ದಾರೆ, ಎಲ್ಲ ಪ್ರಕರಣಗಳಲ್ಲಿಯೂ ಅನುಮತಿ ಕೇಳಬೇಕು ಎಂಬ ನಿಯಮವಿಲ್ಲ, ಹೀಗಾಗಿ ಉಳಿದಿಬ್ಬರ ದೂರಿನಲ್ಲಿ ಶೋಕಾಸ್ ನೋಟಿಸ್ ನೀಡುವ ಅಗತ್ಯವಿಲ್ಲ, ಸಿಎಂ ವಿರುದ್ಧ ಆರೋಪ ಎದುರಾದಾಗ ಸಂಪುಟ ಸಲಹೆ ಒಪ್ಪಲೇಬೇಕೆಂದಿಲ್ಲ, ಆದರೂ ಸಚಿವ ಸಂಪುಟದ ಸಲಹೆಗೆ ರಾಜ್ಯಪಾಲರು ಪರಿಶೀಲಿಸಿ ಉತ್ತರಿಸಿದ್ದಾರೆ, ಡಿಸಿಎಂ ಸಂಪುಟ ಸಭೆ ಅಧ್ಯಕ್ಷತೆ ವಹಿಸಿದ್ದರಿಂದ ಪಕ್ಷಪಾತದ ನಿರ್ಣಯವಾಗಬಹುದು ಎಂದು ರಾಜ್ಯಪಾಲರ ನಿರ್ಧಾರದ ಪರವಾಗಿ ವಾದ ಮಂಡಿಸಲಾಗಿದೆ.
ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಏನು ಎಂಬ ನ್ಯಾಯಾಧೀಶರ ಪ್ರಶ್ನೆಗೆ ನಿರ್ದಿಷ್ಟವಾಗಿ ಏನೂ ಇಲ್ಲ ಎಂದು ತುಷಾರ್ ಮೆಹ್ತಾ ಹೇಳಿರುವುದು ಸದ್ಯಕ್ಕೆ ಸಿಎಂ ಪಾಲಿಗೆ ಇರುವ ಆಶಾಕಿರಣವಾಗಿದೆ.
ಈ ನಡುವೆ ಇವತ್ತು ಬೆಳಗ್ಗೆ 11 ಗಂಟೆಯ ಸಿಎಂ ಮೈಸೂರು ಪ್ರವಾಸ ರದ್ದಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವ ಕಾರ್ಯಕ್ರಮ ಇತ್ತು. ಆದರೆ ಹೈಕೋರ್ಟ್‌ನಲ್ಲಿಂದು ವಿಚಾರಣೆ ಇರುವ ಕಾರಣ, ಪ್ರವಾಸ ರದ್ದು ಮಾಡಿದ್ದಾರೆ. ಮನೆಯಲ್ಲೇ ವಾದ, ಪ್ರತಿವಾದ ಗಮನಿಸಲಿದ್ದು, ಇಂದು ಸಂಜೆ ಮೈಸೂರು ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ನಾಳೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.