ಹುದ್ದೆಗಳ, ಸ್ಥಾನಮಾನಗಳ ಆಮಿಷವೊಡ್ಡಿ ದೌರ್ಜನ್ಯ ಎಸಗುತ್ತಾರೆ ಎಂದ ನಾಯಕಿಯ ಉಚ್ಚಾಟನೆ
ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಆರೋಪ ಬಿರುಗಾಳಿ ಎಬ್ಬಿಸಿದ ಬೆನ್ನಿಗೆ ಈಗ ರಾಜಕೀಯದಲ್ಲೂ ಇದೇ ರೀತಿಯ ಆರೋಪ ಕೇಳಿಬಂದಿದೆ. ಕೇರಳದ ಕಾಂಗ್ರೆಸ್ ನಾಯಕಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಕೈ ಪಡೆಯಲ್ಲಿ ಕಳವಳ ಉಂಟು ಮಾಡಿದೆ. ಕೇರಳ ರಾಜಕಾರಣದಲ್ಲೂ ಲೈಂಗಿಕ ಶೋಷಣೆ ಹಾಸುಹೊಕ್ಕಾಗಿದೆ. ಕೇರಳ ಕಾಂಗ್ರೆಸ್ ಘಟಕದಲ್ಲಿ ಕ್ಯಾಸ್ಟಿಂಗ್ ಕೌಚ್ ರೀತಿಯ ಪರಿಸ್ಥಿತಿಗಳಿವೆ ಎಂದು ಕಾಂಗ್ರೆಸ್ ನಾಯಕಿ ಸಿಮಿ ರೋಸ್‌ಬೆಲ್ ಜಾನ್ ಬಾಂಬ್ ಸಿಡಿಸಿದ್ದಾರೆ. ಈ ಬೆನ್ನಲ್ಲೇ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ರೋಸ್‌ಬೆಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.
ಪಕ್ಷದಲ್ಲಿ ತುಂಬಾ ಹೆಣ್ಮಕ್ಕಳು, ಪುರುಷ ನಾಯಕರಿಂದ ಆಕ್ಷೇಪಾರ್ಹವಾದ ರೀತಿ ಕಿರುಕುಳ ಎದುರಿಸುತ್ತಿದ್ದಾರೆ. ಉನ್ನತ ಹುದ್ದೆಗಳ ಆಸೆ ತೋರಿಸಿ ಪಕ್ಷದ ಕೆಲವು ಹಿರಿಯ ನಾಯಕರು, ಮಹಿಳಾ ನಾಯಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ಭಯಾನಕ ಅನುಭವಗಳನ್ನು ಕೆಲವರು ತಮ್ಮ ಬಳಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ನನ್ನ ಬಳಿಯಿವೆ. ಸಮಯ ಬಂದಾಗ ಅವುಗಳನ್ನು ಬಯಲು ಮಾಡ್ತೇನೆ ಎಂದಿದ್ದಾರೆ.
ಕೆಲ ಮಹಿಳಾಮಣಿಗಳು ಅರ್ಹತೆ ಇಲ್ಲದಿದ್ದರೂ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಹೈಕಮಾಂಡ್‌ಗೆ ಆಪ್ತವಾಗಿರುವ ಮಂದಿಗೆ ಅವಕಾಶ ಸಿಗುತ್ತಿವೆ ಎಂದು ಆರೋಪಿಸಿದ್ದಾರೆ. ಸಿಮಿ ರೋಸ್‌ಬೆಲ್ ಆರೋಪ ಕೇರಳ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿವೆ. ಕಾಂಗ್ರೆಸ್‌ನಲ್ಲೂ ಆಂತರಿಕ ಸಂಘರ್ಷಕ್ಕೆ ಕಾರಣವಾಗಿವೆ. ಸಿಮಿ ರೋಸ್‌ಬೆಲ್ ವಿರುದ್ಧ ಕೆಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿಯ ಮಹಿಳಾ ಮುಖಂಡರು, ಪಿಸಿಸಿಯ ಮಹಿಳಾ ಪದಾಧಿಕಾರಿಗಳು ಮತ್ತು ಮಹಿಳಾ ಕಾಂಗ್ರೆಸ್ ಮುಖ್ಯಸ್ಥರು ಹೈಕಮಾಂಡ್‌ಗೆ ದೂರು ನೀಡಿದೆ. ಆದರೆ ಈ ಆರೋಪಗಳೆಲ್ಲಾ ಸುಳ್ಳು ಎಂದು ಕೇರಳ ಕಾಂಗ್ರೆಸ್ ಘಟಕ ತಿಳಿಸಿದೆ. ಅಲ್ಲದೇ, ತನಿಖೆಗೂ ಮುಂದಾಗಿದೆ.