ಮಾಲ್‌ಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಹೋದ ಪಾಕಿಸ್ಥಾನದ ಜನ
ಕರಾಚಿ : ಪಾಕಿಸ್ಥಾನದ ಆರ್ಥಿಕ ಸ್ಥಿತಿ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಶುಕ್ರವಾರ ಅಲ್ಲಿನ ಮಾಲ್‌ನಲ್ಲಿ ನಡೆದ ಘಟನೆಯೇ ಸಾಕ್ಷಿ. ಮೂಲತಃ ಪಾಕಿಸ್ಥಾನೀಯರೇ ಆದ ವಿದೇಶಿ ಉದ್ಯಮಿಯೊಬ್ಬರು ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿ ಡ್ರೀಮ್ ಬಜಾರ್ ಎಂಬ ಅದ್ದೂರಿ ಮಾಲ್ ತೆರೆದಿದ್ದರು. ಶುಕ್ರವಾರ ಈ ಮಾಲ್ ಉದ್ಘಾಟನೆಗೊಂಡಿದ್ದು, ಮಾಲ್‌ಗೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕೆಲವೊಂದು ವಸ್ತುಗಳ ಮೇಲೆ ರಿಯಾಯಿತಿಯನ್ನು ಘೋಷಿಸಲಾಗಿತ್ತು.
ಆದರೆ ನಂತರ ಆದ ಕಥೆಯೇ ಬೇರೆ. ಮಾಲ್‌ಗೆ ಸಾಗರೋಪಾದಿಯಲ್ಲಿ ಜನ ಹರಿದುಬಂದಿದ್ದು, ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಹೋಗಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಕೊನೆಗೆ ಪೊಲೀಸರು ಬಂದರೂ ಜನಜಂಗುಳಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೊಸ ಮಾಲ್ ಕಣ್ಣೆದುರೇ ಲೂಟಿಯಾಗುತ್ತಿರುವುದನ್ನು ಸಿಬ್ಬಂದಿ ಅಸಹಾಯಕರಾಗಿ ನೋಡುತ್ತಾ ನಿಲ್ಲಬೇಕಾಯಿತು. ಒಂದು ತಾಸಿನೊಳಗೆ ಉಡುಪು, ಆಹಾರ ಸಾಮಗ್ರಿ, ಪಾತ್ರೆ ಪಗಡಿ ಹೀಗೆ ಕೈಗೆ ಸಿಕ್ಕಿದ್ದನ್ನೆಲ್ಲ ಜನ ಲೂಟಿ ಮಾಡಿದ್ದಾರೆ.
ಜನರ ನೂಕುನುಗ್ಗಲಿಗೆ ಸಿಲುಕಿ ಮಾಲ್‌ನ ಸೆಟ್ಟಿಂಗ್‌ಗಳೆಲ್ಲ ಮುರಿದು ಬಿದ್ದಿವೆ. ಕೊನೆಗೆ ನೋಡುವಾಗ ಅದು ಭೀಕರ ಗಲಭೆ ನಡೆದ ಪ್ರದೇಶದಂತೆ ಕಾಣಿಸುತ್ತಿತ್ತು. ಎಲ್ಲವೂ ಸೂರೆ ಹೋದ ಬಳಿಕ ಮಾಲ್‌ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಮಾಲ್ ಲೂಟಿಯಾಗುತ್ತಿರುವ ವೀಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದ್ದು, ಪಾಕಿಸ್ಥಾನದ ಜನರ ಸ್ಥಿತಿಯನ್ನು ನೋಡಿ ಜನ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.