ಸರಕಾರಿ ಜಾಗವನ್ನು ಕಂದಾಯ, ಅರಣ್ಯ ಹಾಗೂ ಗ್ರಾಪಂ ಜಂಟಿ ಸರ್ವೇ ಮಾಡಿ ಸರಕಾರಿ ಇಲಾಖೆಗಳಿಗೆ ಕಾದಿರಿಸಬೇಕು | ಪತ್ರಿಕಾಗೋಷ್ಠಿಯಲ್ಲಿ ಸುರೇಶ್‍ ಭಟ್‍ ಕೊಜಂಬೆ ಆಗ್ರಹ

ಪುತ್ತೂರು: ಕಂದಾಯ. ಅರಣ್ಯ ಇಲಾಖೆ ಹಾಗೂ ಪಂಚಾಯತ್ ಇಲಾಖೆಗಳು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಜಂಟಿ ಸರ್ವೆ ನಡೆಸಿ ನೂರಕ್ಕೆ ನೂರು ಸರಕಾರಿ ಜಾಗವಾಗಿದ್ದರೆ ಆ ಜಾಗವನ್ನು ಶಾಲಾ, ಕಾಲೇಜು, ಗ್ರಾಮ ಪಂಚಾಯತ್ ಕಚೇರಿ, ಸ್ಮಶಾನ ಮುಂತಾದ ಸರಕಾರಿ ಇಲಾಖೆಗಳಿಗೆ ಕಾದಿರಿಸಬೇಕು ಎಂದು ಕರ್ನಾಟಕ ರಾಜ್ಯ ರೈ ಸಂಘ ಹಾಗೂ ಹಸಿರು ರಾಜ್ಯ ಉಪಾಧ್ಯಕ್ಷ ಸುರೇಶ್‍ ಭಟ್‍ ಕೊಜಂಬೆ ಆಗ್ರಹಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದ.ಕ.ಜಿಲ್ಲೆಯ ಒಂದೊಂದು ಗ್ರಾಮದಲ್ಲಿ ಸುಮಾರು 200 ಎಕ್ರೆಯಷ್ಟು ಜಾಗ ಪಹಣಿ ಪತ್ರದಲ್ಲಿ ಸರಕಾರಿ ಎಂದು ನಮೂದಿಸಲಾಗಿದ್ದರೂ, ಕೆಲವರು 25-30 ಎಕ್ರೆಯಷ್ಟು ಸರಕಾರಿ ಜಾಗವನ್ನು ಅಕ್ರಮ ಮಾಡಿಕೊಂಡಿದ್ದು, ಯಾವುದೇ ಕೃಷಿ ಅಥವಾ ಗಡಿ ಗುರುತು ಮಾಡದೆ ಹಡೀಲು ಬಿದ್ದಿರುತ್ತದೆ. ಆದರೆ ಅರಣ್ಯ ಇಲಾಖೆ ರಸ್ತೆ ಬದಿಯಲ್ಲಿ ಯಾವುದೇ ಮರಗಳಿಲ್ಲದ ಜಾಗವನ್ನು ಬೇಲಿ ಹಾಕಿ ಅರಣ್ಯ ಇಲಾಖೆ ಜಾಗವೆಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೃಷಿ ಇಲಾಖೆಗಳಿಂದ ಕೃಷಿಕರಿಗೆ ನೀಡುವ ಪೈಪುಗಳು ತೀರಾ ಕಳಪೆ ಮಟ್ಟದ್ದಾಗಿದೆ, ಎಲ್ಲಾ ಗ್ರಾಮ ಮಟ್ಟದಲ್ಲಿ ಮೆಸ್ಕಾಂ ಇಲಾಖೆಯವರಿಂದ ತೀರಾ ಹಳೆ ತಂತಿ, ಕಂಬಗಳನ್ನು ಹಾಗೂ ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಬೇಕು, ಮನೆ ಹತ್ತಿರದಲ್ಲಿರುವ ಎಚ್‍ ಟಿ ಲೈನ್‍ ಗಳನ್ನು ತೆರವುಗೊಳಿಸಬೇಕು, ಕೃಷಿಕರಿಗೆ ಫಾರ್ಮ್‍ 50, 53, ಹಾಗೂ 57 ರಂತೆ ಸರಕಾರದಿಂದ ಮಂಜೂರಾದ ಜಾಗವನ್ನು ಸುಲಭ ರೀತಿಯಲ್ಲಿ ಕಂದಾಯ ಇಲಾಖೆಯವರು ಪ್ಲಾಟಿಂಗ್ ಮಾಡಿಕೊಡಬೇಕು, ನಿವೇಶ ರಹಿತರಿಗೆ ಪಂಚಾಯಿತಿಯಿಂದ ಸುಲಭ ರೀತಿಯಲ್ಲಿ ನಿವೇಶನ ಸೌಲಭ್ಯ ದೊಕುವಂತಾಗಬೇಕು, ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಳ್ಳುವ ರಸ್ತೆ, ಸೇತುವೆ ತೀರಾ ಕಳಪೆಮಟ್ಟದ್ದಾಗಿದ್ದು, ಒಂದೆರಡು ಮಳೆಗೆ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿದೆ. ಈ ಕುರಿತು ಗಮನಹರಿಸಿ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು.







































 
 

ಈ ಸಂದರ್ಭದಲ್ಲಿ ಕಡಬ ತಾಲೂಕು ಹಾಗೂ ಪುತ್ತೂರು ತಾಲೂಕು ನೂತನ ಸಮಿತಿಯನ್ನು ಘೊಷಿಸಿದರು. ಕಡಬ ತಾಲೂಕು ಅಧ್ಯಕ್ಷರಾಗಿ ಯತೀಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಶಿರಾಡಿ, ಕಾರ್ಯದರ್ಶಿಯಾಗಿ ಸುರೇಶ್‍ ಕೇವಳ ಹಾಗೂ ಪುತ್ತೂರು ತಾಲೂಕು ಅಧ್ಯಕ್ಷರಾಗಿ ರಕ್ಷಿತ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್‍, ಕಾರ್ಯದರ್ಶಿಯಾಗಿ ಹೊನ್ನಪ್ಪ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ, ನಂದ ಕಿರಣ್‍, ನವೀನ್ ಕುಮಾರ್, ಸಾಧು ಜೇಕಬ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top