ನಟಿಯರ ಕ್ಯಾರವಾನ್‌ಗಳಲ್ಲಿ ಇರುತ್ತಿತ್ತು ಹಿಡನ್‌ ಕ್ಯಾಮರಾ : ರಾಧಿಕಾ ಹೇಳಿಕೆಯಿಂದ ಬಿರುಗಾಳಿ

ಮಲಯಾಳಂ ಚಿತ್ರರಂಗದ ಇನ್ನೊಂದು ಕರಾಳ ಮುಖ ಬಯಲುಗೊಳಿಸಿದ ನಟಿ

ಚೆನ್ನೈ : ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಶೋಷಣೆ ಕುರಿತು ಹೇಮಾ ಸಮಿತಿ ಸಲ್ಲಿಸಿದ ತನಿಖಾ ವರದಿ ಬಹಿರಂಗಗೊಂಡ ಬಳಿಕ ಮಲಯಾಳಂ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ತಲ್ಲಣವುಂಟಾಗಿದೆ. ಅನೇಕ ನಟಿಯರು ನಟರು, ನಿರ್ದೇಶಕರು, ನಿರ್ಮಾಪಕರಿಂದ ತಮಗಾಗಿರುವ ಕಹಿ ಅನುಭವಗಳನ್ನು ಬಹಿರಂಗಗೊಳಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಂತೂ ಬಿರುಗಾಳಿಯೇ ಎದ್ದಿದ್ದು, ಹಲವು ಖ್ಯಾತ ನಟರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ನಡುವೆ ಕನ್ನಡ, ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಜನಪ್ರಿಯ ನಾಯಕಿಯಾಗಿದ್ದ ರಾಧಿಕಾ ಶರತ್‌ ಕುಮಾರ್‌ ಕೂಡ ಮಲಯಾಳಂ ಸಿನಿಮಾ ಶೂಟಿಂಗ್‌ ವೇಳೆ ತನಗಾಗದ ಕಹಿ ಅನುಭವವೊಂದನ್ನು ಬಹಿರಂಗಪಡಿಸಿದ್ದಾರೆ.
ಖ್ಯಾತ ನಟ ಶರತ್ ​ಕುಮಾರ್ ಪತ್ನಿಯಾಗಿರುವ ನಟಿ ರಾಧಿಕಾ ಅವರು ಹೇಮಾ ಕಮಿಟಿ ವರದಿ ಬಗ್ಗೆ ಮಾತನಾಡುತ್ತಾ, ನಾನು ಅತ್ಯಂತ ಭೀಕರ ಸನ್ನಿವೇಶಗಳನ್ನು ಎದುರಿಸಿದ್ದೇನೆ. ನಟಿಯರ ಬೆತ್ತಲೆ ಚಿತ್ರಗಳನ್ನು ಪಡೆಯಲು ಅವರು ಬಳಸುವ ಕ್ಯಾರವ್ಯಾನ್​ಗಳಲ್ಲಿ ಸಿಸಿಟಿವಿ ಅಳವಡಿಸುತ್ತಿದ್ದರು ಎಂದಿದ್ದಾರೆ. ಒಮ್ಮೆ ನಾನು ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಹೋಗಿದ್ದೆ. ಅಲ್ಲಿ ನನಗೆ ಕ್ಯಾರವ್ಯಾನ್ ನೀಡಲಾಗಿತ್ತು. ಅದನ್ನೇ ನಾನು ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ಬದಲಿಸಿಸಲು ಬಳಸುತ್ತಿದ್ದೆ ಎಂದಿದ್ದಾರೆ.
ಒಂದು ದಿನ ಕ್ಯಾರವ್ಯಾನ್​ನಿಂದ ಹೊರಗೆ ಬಂದಾಗ ಸೆಟ್​ನಲ್ಲಿದ್ದ ಕೆಲವು ಯುವಕರು ಮೊಬೈಲ್​ನಲ್ಲಿ ಏನೋ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ನಾನು ನನ್ನ ಅಸಿಸ್ಟೆಂಟ್​ಗೆ ಹೇಳಿ ಆ ಯುವಕರು ಮೊಬೈಲ್​ನಲ್ಲಿ ಏನು ನೋಡುತ್ತಿದ್ದಾರೆ ತಿಳಿದುಕೋ ಎಂದು ಹೇಳಿದೆ. ವಿಷಯ ಗೊತ್ತಾದಾಗ ನನಗೆ ಆತಂಕವಾಯ್ತು. ಆ ಯುವಕರು ಕ್ಯಾರಾವ್ಯಾನ್​ನಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಗಳನ್ನು ನೋಡುತ್ತಿದ್ದರಂತೆ ಎಂದಿದ್ದಾರೆ ರಾಧಿಕಾ.
ಕ್ಯಾರಾವ್ಯಾನ್​ಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸುವ ವಿಷಯ ತಿಳಿದ ಮೇಲೆ ನಾನು ಕ್ಯಾರಾವ್ಯಾನ್ ಬಳಸುವುದೇ ಬಿಟ್ಟೆ. ಹೋಟೆಲ್ ರೂಂಗೆ ಹೋಗಿ ಬಟ್ಟೆ ಬದಲಿಸಲು ಆರಂಭಿಸಿದೆ. ಇದು ನನ್ನೊಬ್ಬಳ ಅನುಭವ ಅಲ್ಲ, ಹಲವು ನಟಿಯರು ಈ ಸಮಸ್ಯೆ ಎದುರಿಸಿದ್ದಾರೆ. ನಟಿಯರು ಉಳಿದುಕೊಳ್ಳುವ ರೂಮ್‌ನ ಬಾಗಿಲುಗಳನ್ನು ಪುರುಷರು ಹೇಗೆ ಬಡಿಯುತ್ತಾರೆ ಎಂದು ಕೆಲವು ನಟಿಯರು ನನ್ನ ಬಳಿ ಹೇಳಿಕೊಂಡಿದ್ದಾರೆ. ಸಹಾಯ ಮಾಡುವಂತೆ ಮನವಿ ಸಹ ಮಾಡಿದ್ದಾರೆ ಎಂದು ರಾಧಿಕಾ ಶರತ್ ಹೇಳಿಕೊಂಡಿದ್ದಾರೆ.

ಹೇಮಾ ವರದಿ ಪ್ರಕಟವಾದ ಬಳಿಕ ಮಲಯಾಳಂನ ಹಿರಿಯ ನಟರಾದ ಮುಕೇಶ್, ಸಿದ್ಧಿಕ್, ಜಯಸೂರ್ಯ ಇನ್ನಿತರರ ವಿರುದ್ಧ ದೂರು ದಾಖಲಾಗಿದೆ. ಹಿರಿಯ ನಿರ್ದೇಶಕರಾದ ರಂಜಿತ್, ವಿ.ಕೆ ಪ್ರಕಾಶ್ ಇನ್ನಿತರರ ವಿರುದ್ಧವೂ ದೂರು ದಾಖಲಾಗಿದೆ. ಹೇಮಾ ವರದಿ ಬಹಿರಂಗದ ಬಳಿಕ ಕೇರಳದ ಸಿನಿಮಾ ಕಲಾವಿದರ ಅತ್ಯಂತ ಪ್ರಭಾವಶಾಲಿ ಸಂಘಟನೆಯಾಗಿರುವ ʼಅಮ್ಮʼದ ಅಧ್ಯಕ್ಷ ಸ್ಥಾನಕ್ಕೆ ಮೋಹನ್​ಲಾಲ್ ರಾಜೀನಾಮೆ ನೀಡಬೇಕಾಯಿತು. ಪದಾಧಿಕಾರಿಗಳು ಸಹ ರಾಜೀನಾಮೆ ನೀಡಿರುವುದರಿಂದ ಇಡೀ ಆಡಳಿತ ಸಮಿತಿಯೇ ಬರ್ಖಾಸ್ತಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top