ಸವಣೂರು: ಮಾನವ ಜೀವವನ್ನು ಉಳಿಸುವ ಅತಿ ಅವಶ್ಯವಾದ ಸಾಮಾನ್ಯ ಪ್ರಥಮ ಚಿಕಿತ್ಸೆ ಮತ್ತು ಹೃದಯ ಸ್ತಂಭನದ ಸಮಸ್ಯೆಯಾದಾಗ ವಿಶೇಷ ಪ್ರಥಮ ಚಿಕಿತ್ಸೆಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತವಾದ ತರಬೇತಿಯನ್ನು ನೀಡಲಾಯಿತು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಹಿರಿಯ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಅವರು ತರಬೇತಿಯನ್ನು ನಡೆಸಿಕೊಟ್ಟರು.
82 ವರ್ಷದ ಯುವಕ!
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಮಚಂದ್ರ ಭಟ್ ಅವರು ಈಗ 82 ರ ಉತ್ಸಾಹಿ. ಈ ತನಕ ಭಾರತದಾದ್ಯಂತ ಸಾವಿರಾರು ಶಾಲೆಗಳಿಗೆ ಭೇಟಿ ನೀಡಿ 50,000ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಅವರು ತರಬೇತಿ ನೀಡಿದ್ದಾರೆ.
ರೋಟರಿ ಕ್ಲಬ್ ಇಲೈಟ್ ಪುತ್ತೂರು ಇದರ ಮೂಲಕ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ವಹಿಸಿದ್ದರು.
ಪ್ರಾತ್ಯಕ್ಷಿಕೆ ಮೂಲಕ ಸಿ. ಪಿ. ಆರ್. (Cardiopulmonary Resuscitation) ತರಬೇತಿಯನ್ನು ನಡೆಸಿಕೊಟ್ಟ ಡಾ. ಭಟ್ ಅವರು ವಿದ್ಯಾರ್ಥಿಗಳಿಗೂ ಪ್ರತ್ಯಕ್ಷ ಅನುಭವದ ಅವಕಾಶ ಮಾಡಿಕೊಟ್ಟರು.
ರೊಟೇರಿಯನ್ ಆಸ್ಕರ್ ಆನಂದ್ ಸಹಕರಿಸಿದರು. ವಿದ್ಯಾರಶ್ಮಿ ಸ್ವತಂತ್ರ ಪದವಿ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ತೇಜಸ್ವಿ ವಂದಿಸಿದರು.