ಹೈಕೋರ್ಟ್‌ನಲ್ಲಿಂದು ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ನೀಡಿದ ನಿರ್ಧಾರದ ವಿಚಾರಣೆ
ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪ್ರಕರಣ ಇಂದು ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಿದೆ.
ಇಡೀ ರಾಜ್ಯದ ಗಮನ ಇಂದು ಹೈಕೋರ್ಟ್ ನೀಡಬಹುದಾದ ತೀರ್ಪಿನ ಮೇಲಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಗುರುವಾರ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘಿ ವಾದ ಮಂಡಿಸಿ ಪ್ರಾಸಿಕ್ಯೂಷನ್ ಕ್ರಮವನ್ನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಸಿಂಘಿ ವಾದ ಪೂರ್ಣಗೊಂಡಿದ್ದು, ರಾಜ್ಯಪಾಲರ ಕಚೇರಿ ಹಾಗೂ ಖಾಸಗಿ ದೂರುದಾರರ ಪರ ವಕೀಲರು ಪ್ರತಿ ವಾದ ಮಂಡನೆಗೆ ಶನಿವಾರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ಕ್ಕೆ ಆರಂಭವಾಗ ಲಿರುವ ಕಲಾಪದಲ್ಲಿ ಪ್ರತಿವಾದಿಗಳ ವಾದ ಮಂಡನೆಯಾಗಲಿದೆ. ಪ್ರತಿವಾದಿಗಳ ವಾದಕ್ಕೆ ಉತ್ತರ ನೀಡಲು ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಿದರೆ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡುವ ಸಾಧ್ಯತೆಯಿದೆ. ಒಂದೊಮ್ಮೆ ಅರ್ಜಿದಾರರ ಪರವಕೀಲರು ಹಾಗೂ ಪ್ರತಿವಾದಿಗಳ ವಾದ-ಪ್ರತಿವಾದ ಪ್ರಕ್ರಿಯೆ ಶನಿವಾರವೇ ಪೂರ್ಣಗೊಂಡರೆ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಬಹುದು.
ಹೈಕೋರ್ಟ್ ವಿಚಾರಣೆಯ ಫಲಿತಾಂಶ ಏನಾಗಬಹುದು ಎಂಬ ತೀವ್ರ ಕುತೂಹಲ ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ವಲಯದಲ್ಲಿ ಇದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಶನಿವಾರವೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುತ್ತದೆಯೇ ಅಥವಾ ವಾದ-ಪ್ರತಿವಾದ ಪೂರ್ಣಗೊಳ್ಳದೆ ಅರ್ಜಿ ವಿಚಾರಣೆ ಮುಂದೂಡಿಕೆ ಕಾಣುತ್ತದೆಯೇ ಎಂಬ ಕುತೂಹಲ ಮುಂದುವರಿದಿದೆ.