ಪಡುಬಿದ್ರಿ ಬೀಚ್‌ನಲ್ಲಿ ಬಿಕಿನಿ ಫೋಟೊಶೂಟ್‌ಗೆ ತಡೆ : ಪೊಲೀಸರ ವಿರುದ್ಧ ಮಹಿಳೆ ಆಕ್ರೋಶ

ಉಡುಪಿ: ಉಡುಪಿ ಸಮೀಪ ಪಡುಬಿದ್ರಿ ಬೀಚ್‌ನಲ್ಲಿ ಮಹಿಳೆಯೊಬ್ಬರ ಬಿಕಿನಿ ಫೋಟೊ ಶೂಟಿಂಗನ್ನು ಪೊಲೀಸರು ತಡೆದಿರುವುದು ಈಗ ಭಾರಿ ಚರ್ಚೆಗೀಡಾಗಿದೆ.
ವಿವಾಹಿತ ಮಹಿಳೆಯೊಬ್ಬರು ಬಿಕಿನಿ ಫೋಟೋಶೂಟ್ ಶುಕ್ರವಾರ ಪಡುಬಿದ್ರಿ ಬೀಚ್‌ಗೆ ಬಂದಿದ್ದರು. ಆಕೆಯ ಗಂಡನೇ ಫೋಟೊಗ್ರಾಫರ್‌ ಆಗಿದ್ದರು. ಆದರೆ ಪೊಲೀಸರು ಮತ್ತು ಸ್ಥಳೀಯರು ಈ ಅಸಭ್ಯ ಫೋಟೊಶೂಟ್‌ಗೆ ತಡೆಯೊಡ್ಡಿ ಮಹಿಳೆಯನ್ನು ವಾಪಸು ಕಳುಹಿಸಿದ್ದಾರೆ.


ನಂತರ ಮಹಿಳೆ ಅಡ್ಡಿಪಡಿಸಿದ ಪೊಲೀಸರ ವಿರುದ್ದವೇ ಆಕ್ರೋಶ ಹೊರ ಹಾಕಿದ್ದಾರೆ. ಮಹಿಳೆಯನ್ನು ಖ್ಯಾತಿಶ್ರೀ ಎಂದು ಗುರುತಿಸಲಾಗಿದೆ. khyatishree2 ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ ಈಕೆ ಸಕತ್‌ ಖ್ಯಾತಳಾಗಿದ್ದಾರೆ. ಉತ್ತರ ಭಾರತದ ಈಕೆ ಕರ್ನಾಟಕ ಪ್ರವಾಸದಲ್ಲಿದ್ದು, ಪಡುಬಿದ್ರಿಗೆ ಬಂದಾಗ ಬೀಚ್‌ನಲ್ಲಿ ಬಿಕಿನಿ ಫೋಟೋ ಮಾಡಿಸಲು ಮುಂದಾಗಿದ್ದಾರೆ.
ನಂತರ ಈಕೆ ಸಾಮಾಜಿಕ ಮಾಧ್ಯಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಪೊಲೀಸರ ವಿರುದ್ಧವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ವ್ಯಾಪಕ ಚರ್ಚೆಗೀಡಾಗಿದೆ.
ಯುವತಿಯ ಬಿಕಿನಿ ಫೋಟೋಶೂಟ್ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಸಂಭಾವ್ಯ ಸಮಸ್ಯೆಯ ಬಗ್ಗೆ ಅರಿತು ಸ್ಥಳಕ್ಕೆ ಧಾವಿಸಿ ಮಹಿಳೆಗೆ ಬಟ್ಟೆ ಬದಲಾಯಿಸುವಂತೆ ಸೂಚಿಸಿದ್ದಾರೆ.


ಈ ವಿಚಾರವಾಗಿ ಇನ್​ಸ್ಟಾಗ್ರಾಂನಲ್ಲಿ ಫೋಟೋಶೂಟ್‌ ಮಾಡಿದ ಫೋಟೋ ಸಹಿತ ಮಾಹಿತಿ ನೀಡಿರುವ ಮಹಿಳೆ, ಪಡುಕೆರೆ ಬೀಚ್‌ನಲ್ಲಿ ತನಗೆ ಕಹಿ ಅನುಭವಾಗಿದ್ದು, ಫೋಟೋಶೂಟ್ ಮಾಡಿಸುತ್ತಿದ್ದಾಗ ಬಟ್ಟೆ ಬದಲಿಸುವಂತೆ ಸ್ಥಳೀಯ ಪೊಲೀಸರು ಸೂಚಿಸಿದ್ದಾರೆ. ಬೇರೆ ಬಟ್ಟೆ ಹಾಕದಿದ್ದರೆ ಸ್ಥಳೀಯರು ಹಲ್ಲೆ ನಡೆಸುತ್ತಾರೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರೆಂದು ಮಹಿಳೆ ಪ್ರಶ್ನಿಸಿದ್ದಾರೆ.
ಬೀಚ್‌ ಸಾರ್ವಜನಿಕ ಪ್ರದೇಶ, ಫೋಟೋಶೂಟ್‌ ಮಾಡಿದ್ರೆ ತಪ್ಪೇನು? ಬಿಕಿನಿ ಹಾಕಿ ಫೋಟೋಶೂಟ್‌ ಮಾಡುವುದು ಕಾನೂನು ಉಲ್ಲಂಘನೆಯೇ? ಬಿಕಿನಿ ಹಾಕಬಾರದು ಎಂದು ಕಾನೂನು ಇದೆಯೇ ಎಂದು ಸಾಮಾಜಿಕ ಜಾಲತಾಣದ ಮೂಲಕ ಮಹಿಳೆ ಉಡುಪಿ ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಈ ಮಹಿಳೆಯ ಇನ್​ಸ್ಟಾಗ್ರಾಂ ಪ್ರೊಫೈಲ್ ಮಾಹಿತಿ ಪ್ರಕಾರ ಆಕೆ ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ಆಕೆ ರೂಪದರ್ಶಿಯೂ ಆಗಿದ್ದಾರೆ. ಈಕೆಗೆ ಮದುವೆಯಾಗಿದ್ದು ಗಂಡನೇ ಈಕೆಯ ಫೋಟೋಗ್ರಾಫರ್‌ ಆಗಿದ್ದಾನೆ. ಇನ್ ಸ್ಟಾಗ್ರಾಂನಲ್ಲಿ ಆಕೆಗೆ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಇದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top