ಶುದ್ಧ ಶಾಖಾಹಾರಿ ಎಂದು ಮಾರ್ಕೆಟಿಂಗ್ ಮಾಡಿ ಮೋಸ ಎಂದು ಆರೋಪ
ಹೊಸದಿಲ್ಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ಕಾನೂನು ಸಂಕಟ ಇನ್ನೂ ಮುಗಿದಿಲ್ಲ. ಅವರ ಪತಂಜಲಿ ಬ್ರ್ಯಾಂಡ್‌ನ ದಿವ್ಯ ದಂತ್ ಮಂಜನ್ ಎಂಬ ಗಿಡಮೂಲಿಕೆಯಿಂದ ತಯಾರಾಗುವ ಹಲ್ಲು ತಿಕ್ಕುವ ಪುಡಿಯಲ್ಲಿ ನಾನ್ ವೆಜಿಟೇರಿಯನ್ ಅಂಶವಿದೆ ಎಂದು ಆರೋಪಿಸಿ ದಿಲ್ಲಿ ಹೈಕೋರ್ಟಿನಲ್ಲಿ ದಾವೆ ಹೂಡಲಾಗಿದೆ.
ಪತಂಜಲಿ ಕಂಪನಿ ದಿವ್ಯ ದಂತ್ ಮಂಜನ್ ದಂತ ಪುಡಿಯನ್ನು ಶುದ್ಧ ಶಾಕಾಹಾರಿ ಎಂದು ಹೇಳಿ ಮಾರ್ಕೆಟಿಂಗ್ ಮಾಡುತ್ತಿದೆ. ಆದರೆ ಅದರಲ್ಲಿ ನಾನ್ ವೆಜಿಟೇರಿಯನ್ ಅಂಶ ಇದೆ. ನಾನು ಅದನ್ನು ಗಿಡಮೂಲಿಕೆ ಉತ್ಪನ್ನ ಎಂದು ನಂಬಿ ಬಹಳ ಕಾಲ ಉಪಯೋಗಿಸಿದ್ದೆ. ಇತ್ತೀಚೆಗಿನ ಸಂಶೋಧನೆ ಅದರಲ್ಲಿ ಮೀನಿನಿಂದ ತೆಗೆದ ಅಂಶಗಳಿರುವುದನ್ನು ದೃಢಪಡಿಸಿದೆ ಎಂದು ದಾವೆ ಹೂಡಿದ ವಕೀಲ ಯತೀನ್ ಶರ್ಮ ಹೇಳಿದ್ದಾರೆ.
ದಿವ್ಯ ದಂತ್ ಮಂಜನ್ ಪ್ಯಾಕೆಟ್‌ನಲ್ಲಿ ಹಸಿರು ಚುಕ್ಕಿ ಇದೆ. ಇದು ಉತ್ಪನ್ನ ಸಂಪೂರ್ಣ ಶಾಖಾಹಾರಿ ಎಂಬುದರ ಸಂಕೇತ. ಆದರೆ ವೈಜ್ಷಾನಿಕ ಪರೀಕ್ಷೆಯಲ್ಲಿ ದಿವ್ಯಮಂಜನ್‌ನಲ್ಲಿ ಮೀನಿನಿಂದ ತೆಗೆಯುವ ʼಸೆಪಿಯ ಒಫಿಸಿನಲಿಸ್ʼ ಎಂಬ ರಾಸಾಯನಿಕ ಅಂಶ ಇರುವುದನ್ನು ದೃಢಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಪತಂಜಲಿ ಜಾಹೀರಾತಿನಲ್ಲಿ ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡಲಾಗಿದೆ. ಇದು ಡ್ರಗ್ಸ್ & ಕಾಸ್ಮೆಟಿಕ್ಸ್ ಕಾಯಿದೆಯ ಉಲ್ಲಂಘನೆಯಾಗುತ್ತದೆ. ದಿವ್ಯ ಮಂಜನ್ ಬಳಸಿದ ಕಾರಣ ತನ್ನ ಹಾಗೂ ತನ್ನ ಕುಟುಂಬದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಅವರು ದೂರಿನಲ್ಲಿ ಆರೊಪಿಸಿದ್ದಾರೆ.
ಬಾಬಾ ರಾಮದೇವ್ ಸ್ವತಹ ಯೂಟ್ಯೂಬ್‌ನಲ್ಲಿ ದಿವ್ಯ ದಂತ್ ಮಂಜನ್‌ನಲ್ಲಿ ಇರುವ ಸಮುದ್ರಫೆನ್ ಅಥವಾ ಸೆಪಿಯ ಒಫಿಸಿನಲಿಸ್ ಜಲಚರ ಜನ್ಯ ಅಂಶ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದವರು ಹೇಳಿದ್ದಾರೆ. ದೂರನ್ನು ವಿಚಾರಣೆಗೆ ಸ್ವೀಕರಿಸಿರುವ ಹೈಕೋರ್ಟ್ ಪತಂಜಲಿ ಆಯುರ್ವೇದ, ಬಾಬಾ ರಾಮ್‌ದೇವ್ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.