ಪುತ್ತೂರು: ಶಿಕ್ಷಣ ಎಂದರೆ ಕೇವಲ ಅಂಕಗಳಿಕೆ ಮಾತ್ರ ಸೀಮಿತವಲ್ಲ. ಅದು ವ್ಯವಹಾರ ಜ್ಞಾನಕ್ಕಿರುವ ಸಂಗತಿ. ನಮ್ಮ ಶೈಕ್ಷಣಿಕ ಹಂತದ ನಂತರ ಬದುಕು ಕಟ್ಟಿಕೊಳ್ಳಲು ಸಾಂಸ್ಕೃತಿಕ ಕಾರ್ಯಕ್ರಮ ಸಹಾಯ ಮಾಡುತ್ತದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ) ವಿವೇಕಾನಂದ ಸಂಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷ ರಂಜಿನಿ, ಕನ್ನಡ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಕೀರ್ತಿಶೇಷ ಪಾದೇಕಲ್ಲು ನಾರಾಯಣ ಭಟ್ಟರ ಜನ್ಮಶತಮಾನೋತ್ಸವದ ಸವಿನೆನಪಿನಲ್ಲಿ ವಾಲ್ಮೀಕಿ ರಾಮಾಯಣದ ಪಾತ್ರಗಳ ಅಂತರಂಗ ನಿರೂಪಣೆ-10 ವತಿಯಿಂದ ಆಯೋಜಿಸಲಾದ ವಾಲ್ಮೀಕಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿಶ್ರಾಂತ ಪ್ರಾಚಾರ್ಯ ಡಾ. ಪಾದೇಕಲ್ಲು ವಿಷ್ಣು ಭಟ್ಟ ಆಶಯದ ನುಡಿಗಳನ್ನಾಡುತ್ತ, ಕೀರ್ತಿ ಶೇಷ ಪಾದೆಕಲ್ಲು ನಾರಾಯಣ ಭಟ್ ಹಲವು ರಂಗದಲ್ಲಿ ಹೆಸರು ಗಳಿಸಿದವರು. ಮಾತ್ರವಲ್ಲದೆ ಕೃಷಿಕರಾಗಿಯೂ ಸೇವೆ ಸಲ್ಲಿಸಿದವರು. ಅವರ ಜನ್ಮದಿನದಂದು ಅವರ ನೆನಪನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರ್ವರಿಗೂ ಸದುಪಯೋಗವಾಗಲಿ ಎಂದು ವಾಲ್ಮೀಕಿ ರಾಮಾಯಣದ ಬಗೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ., ಆಡಳಿತ ಮಂಡಳಿ ಸದಸ್ಯೆ ಶುಭಾ ಅಡಿಗ , ವಿದ್ವಾನ್ ಕೇಕಣಾಜೆ ಕೇಶವ ಭಟ್ ಉಪಸ್ಥಿತರಿದ್ದರು.
ವಿದ್ವಾನ್ ಉಮಾಕಾಂತ್ ಭಟ್ ಕೆರೆಕೈ ಶುಭ ಹಾರೈಸಿ, ವಾಲ್ಮಿಕಿಯ ಅಂತರಂಗದ ಚಿತ್ರಣವನ್ನು ಅದ್ಭುತವಾಗಿ ನಡೆಸಿಕೊಟ್ಟರು. ಕಾಲೇಜಿನ ಯಕ್ಷ ರಂಜಿನಿಯ ವಿದ್ಯಾರ್ಥಿನಿ ಶ್ರೇಯಾ ಆಚಾರ್ಯ ಮುಮ್ಮೇಳದಲ್ಲಿ ಹಾಗೂ ಭವಿಷ್ ಭಂಡಾರಿ, ಶಾಂಭವಿ ಹಾಗೂ ಯತೀನ್ ಹಿಮ್ಮೇಳದಲ್ಲಿ ಸಹಕರಿಸಿದರು
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ.ಎಂ ಸಂಯೋಜಿಸಿದರು. ಸಂಯೋಜಕ ಗಣರಾಜ ಕುಂಬ್ಳೆ ರಾಮಕುಂಜ ವಂದಿಸಿದರು.