ಉಚಿತ ಕೊಡುಗೆಗಳಿಂದ ಬೊಕ್ಕಸ ಖಾಲಿ
ಶಿಮ್ಲಾ: ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಕೊಡುಗೆಗಳ ಹೊಡೆತದಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಅಲ್ಲಿ ಶಾಸಕರಿಗೆ ವೇತನ ನೀಡಲು ಹಣ ಇಲ್ಲದಂತಾಗಿದೆ. ಹೀಗಾಗಿ ಸರಕಾರ ಸಚಿವರೂ ಸೇರಿದಂತೆ ಎಲ್ಲ ಶಾಸಕರಿಗೆ ಎರಡು ತಿಂಗಳ ವೇತನ, ಭತ್ಯೆಗಳು ಸೇರಿದಂತೆ ಯಾವೊಂದು ಪಾವತಿಯೂ ಸಾಧ್ಯವಿಲ್ಲ ಎಂದು ಹೇಳಿದೆ.
ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕತೆ ಉತ್ತಮ ಸುಧಾರಣೆ ಕಾಣಬೇಕಿದೆ. ಆದ್ದರಿಂದ ಮುಂದಿನ 2 ತಿಂಗಳು ಯಾವುದೇ ಸಂಬಳ, ಟಿಎ, ಡಿಎ ತೆಗೆದುಕೊಳ್ಳುವುದಿಲ್ಲ ಅಂತ ಸಂಪುಟದ ಎಲ್ಲ ಸದಸ್ಯರು ನಿರ್ಧಸಿರುವುದಾಗಿ ಸಿಎಂ ತಿಳಿಸಿದ್ದಾರೆ. ವೇತನ ಉಳಿತಾಯ ಒಂದು ಸಣ್ಣ ಮೊತ್ತವಾಗಿದೆ. ಇದರ ಹೊರತಾಗಿ ಎಲ್ಲ ಶಾಸಕರು ಬೊಕ್ಕಸಕ್ಕೆ ಕೊಡುಗೆ ನೀಡಬೇಕೆಂದು ವಿನಂತಿ ಮಾಡಿದ್ದಾರೆ.
ಕರ್ನಾಟಕದಂತೆ ಹಿಮಚಲ ಪ್ರದೇಶದಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಲವು ಬಿಟ್ಟಿ ಯೊಜನೆಗಳ ಭರವಸೆ ನೀಡಿದೆ. ಗೆದ್ದ ಬಳಿಕ ಅವುಗಳನ್ನು ಜಾರಿಗೊಳಿಸಲು ಹೋಗಿ ಬೊಕ್ಕಸ ಬರಿದಾಗಿದೆ ಎನ್ನಲಾಗಿದೆ. ಹಳೆಯ ಪಿಂಚಣಿ ಯೋಜನೆ, ಗೃಹಲಕ್ಷ್ಮೀ ಮಾದರಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ., ಉಚಿತ ವಿದ್ಯುತ್ ಈ ಯೋಜನೆಗಳಿಂದಾಗಿ ಈಗಾಗಲೇ ರಾಜ್ಯದ ಮೇಲೆ 86,589 ಕೋಟಿ ರೂ. ಸಾಲದ ಹೊರೆಯಾಗಿದೆ ಎಂದು ವರದಿಯಾಗಿದೆ.
1,500 ರೂ. ಪಾವತಿಸುವ ಗ್ಯಾರಂಟಿ ಯೋಜನೆಗೆ 5 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳಿದ್ದಾರೆ. ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಯಿಂದ ಪ್ರತಿವರ್ಷ 1,000 ಕೋಟಿ ರೂ., ರಾಜ್ಯ ಸರ್ಕಾರ ನೌಕರರ ವೇತನಕ್ಕೆ 20,639 ಕೋಟಿ ಹೊರೆಯಾಗುತ್ತಿದೆ. ಇದರೊಂದಿಗೆ 680 ಕೋಟಿ ರೂ.ಗಳ ರಾಜೀವ್ ಗಾಂಧಿ ಸ್ವಯಂಉದ್ಯೋಗ ಪ್ರಾರಂಭ ಯೋಜನೆಯಡಿ ಇ-ಟ್ಯಾಕ್ಸಿ ಯೋಜನೆ ಆರಂಭಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಬೊಕ್ಕಸ ಖಾಲಿಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಜುಲೈನಲ್ಲಿ ವಿದ್ಯುತ್ ಸಬ್ಸಿಡಿಯನ್ನು ಹಿಂಪಡೆದು, ಬಿಪಿಎಲ್, ಐಆರ್‌ಡಿಪಿ ಮತ್ತು ದುರ್ಬಲ ವರ್ಗದ ಜನರಿಗೆ ಮಾತ್ರ ಈ ಸಬ್ಸಿಡಿ ನಿಗದಿಪಡಿಸಿತು.