ಬೆಂಗಳೂರು: ಗೋಬಿ ಮಂಚೂರಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿಗಳಲ್ಲಿರುವ ಹಾನಿಕಾರಕ ರಾಸಾಯನಿಕ ಅಂಶಗಳನ್ನು ನಿಷೇಧಿಸಿರುವ ಆಹಾರ ಇಲಾಖೆ ಈಗ ಬೇಕರಿ ತಿನಿಸುಗಳ ಮೇಲೆ ಕಣ್ಣಿಟ್ಟಿದೆ. ಬೇಕರಿ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜನರು ಹೆಚ್ಚು ಸೇವನೆ ಮಾಡುವ ಕೇಕ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ.
ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್‌ಗಳು ಹಾಗೂ ಕಲರ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಪೈನಾಪಲ್, ರೆಡ್ ವೆಲ್ವೆಟ್, ಚಾಕೋಲೇಟ್ ಸೇರಿದಂತೆ ವಿವಿಧ ಫ್ಲೇವರ್‌ಗಳನ್ನ ಜನರು ಇಷ್ಟ ಪಡುವುದರಿಂದ ಅವುಗಳ ತಯಾರಿಕೆ ಅಥವಾ ಅದಕ್ಕೆ ಹಾಕುವ ಪದಾರ್ಥಗಳು ಜನರು ಆರೋಗ್ಯಕ್ಕೆ ಪೂರಕವಾಗಿದೆಯೇ ಅಥವಾ ಮಾರಕವಾಗೆದೆಯೇ ಎಂಬುದರ ಪರೀಕ್ಷೆ ನಡೆಯಲಿದೆ.
ಸುಮಾರು 264 ಕಡೆಗಳಲ್ಲಿ ಕೇಕ್‌ಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದರ ವರದಿಗೆ ಇಲಾಖೆ ಕಾಯುತ್ತಿದೆ. ಒಂದು ವೇಳೆ, ವರದಿ ಪಾಸಿಟಿವ್ ಬಂದಿದ್ದೇ ಆದಲ್ಲಿ ಕೆಲವೊಂದು ಪದಾರ್ಥಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆಹಾರಗಳಿಗೆ ಬಳಸುವ ಕೆಲವೊಂದು ಪದಾರ್ಥಗಳಿಗೆ ನಿರ್ಬಂಧ ವಿಧಿಸುತ್ತಿರುವುದನ್ನು ಬೇಕರಿ ಮಾಲೀಕರ ಸಂಘಟನೆ ಸ್ವಾಗತಿಸಿದೆ. ನಾವು ಸಹಜ ಕಲರ್ ಬಳಕೆ ಮಾಡುತ್ತೇವೆ. ಕೆಮಿಕಲ್ ಬಳಕೆ ಮಾಡಲ್ಲ ಆಹಾರ ಇಲಾಖೆಯ ಕ್ರಮ ಸರಿಯಾಗಿದೆ ಎಂದು ಬೇಕರಿ ಮಾಲೀಕರು ಹೇಳಿದ್ದಾರೆ.