ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಸೇನಾಪಡೆ ನಡೆಸಿದ ಎನ್ಕೌಂಟಗೆ ಮೂವರು ಉಗ್ರರು ಬಲಿಯಾಗಿದ್ದಾರೆ. ಕುಪ್ವಾರ ಜಿಲ್ಲೆಯ ತಂಗ್ದಾರ್ಲ್ಲಿ ಕೆಲ ಉಗ್ರರು ಗಡಿ ನುಸುಳಲು ಯತ್ನ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನಾಪಡೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತ್ತು. ಇದರಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಈ ನಡುವೆ ರಜೋರಿಯಲ್ಲಿಯೂ ಉಗ್ರರು ಹಾಗೂ ಸೇನಾಪಡೆ ನಡುವೆ ಗುಂಡಿನ ಕಾಳಗ ಮುಂದುವರಿದಿದ್ದು, ಸೇನಾಪಡೆ ಎನ್ಕೌಟರ್ ಆರಂಭಿಸಿದೆ. ಖೇರಿ ಮೊಹ್ರಾ ಲಾಠಿ ಮತ್ತು ದಂತಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಅನುಮಾನಾಸ್ಪದ ಓಡಾಟಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೇನಾಪಡೆ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು. ರಾತ್ರಿ 11.45 ರ ಸುಮಾರಿಗೆ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಈ ವೇಳೆ ಸೇನಾಪಡೆ ಕೂಡ ದಿಟ್ಟ ಉತ್ತರ ನೀಡಿದ್ದು, ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಸ್ಥಳ ಸುತ್ತುವರಿದಿರುವ ಸೇನಾಪಡೆ ಉಗ್ರರನ್ನು ಸದೆಬಡಿಯಲು ಕಾರ್ಯಾಚರಣೆ ಮುಂದುವರಿಸಿದೆ.